ರೈತರಿಗೆ ಉತ್ತೇಜನ ನೀಡುವಲ್ಲಿ ಅಧಿಕಾರಿಗಳು ವಿಫಲ

cmr srinath
ಸಿಎಂಆರ್​ ಶ್ರೀನಾಥ್​
Published on

ಕೋಲಾರ: ಹಲವು ವರ್ಷಗಳಿಂದ ಟೊಮ್ಯಾಟೊ ಸೇರಿ ವಿವಿಧ ಬೆಳೆಗಳಿಗೆ ರೋಗಬಾಧೆ ಕಾಡುತ್ತಿದೆ. ಇದರಿಂದಾಗಿ ಬೆಳೆ ಬೆಳೆಯುವುದು ರೈತರಿಗೆ ಸವಾಲಿನ ಕೆಲಸವಾಗಿದೆ. ಇನ್ನಾದರೂ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕು ಎಂದು ಸಿಎಂಆರ್ ಟೊಮ್ಯಾಟೊ ಮಂಡಿ ಮಾಲೀಕ ಸಿಎಂಆರ್ ಶ್ರೀನಾಥ್ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಬೆಳೆಯನ್ನು ಮಗುವಿನಂತೆ ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕು. ಅದು ಇತ್ತೀಚಿನ ದಿನಗಳಲ್ಲಿ ಬಲು ದುಬಾರಿಯಾಗಿದ್ದು, ರೋಗಗಳ ಬಾಧೆಯಿಂದ ಬೆಳೆ ರಕ್ಷಣೆ ಮಾಡುವುದು ಸವಾಲಿನ ಕೆಲಸವಾಗಿದೆ ಎಂದರು.
ಜಿಲ್ಲೆಯಲ್ಲಿ ಟೊಮ್ಯಾಟೊ ಜತೆಗೆ ಕ್ಯಾಪ್ಸಿಕಂ, ಪಪ್ಪಾಯ, ಆಲೂಗಡ್ಡೆಯನ್ನು ಪ್ರಮುಖವಾಗಿ ಬೆಳೆಯುತ್ತಾರೆ. ಹವಾಮಾನ ವೈಪರೀತ್ಯದ ಜತೆಗೆ ಕೀಟಬಾಧೆ, ಅಂಗಮಾರಿ ರೋಗ ಬೆಳೆಗಳಿಗೆ ಕಾಡುತ್ತಿವೆ. ಇದರಿಂದಾಗಿ ರೈತರು ವ್ಯವಸಾಯ ಕ್ಷೇತ್ರದಿಂದ ದೂರ ಸರಿಯುವ ಆತಂಕ ಕಾಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಬೆಳೆಗಳಿಗೆ ಬಿಳಿ ಸೊಳ್ಳೆ, ಟ್ರಿಪ್ಸ್ ಕೀಟ ಬಾಧೆ ಕಾಡುತ್ತಿದೆ. ಬಿಳಿ ಸೊಳ್ಳೆ ಜೀವಿತಾವಧಿ ೪೫ ದಿನ ಮಾತ್ರ, ಅದು ಒಂದು ಬಾರಿ ಬೆಳೆಗೆ ಅಂಟಿಕೊಂಡರೆ ಸಂಪೂರ್ಣ ನಾಶ ಮಾಡುತ್ತದೆ. ಇತಂಹ ಗಂಭೀರ ಸಮಸ್ಯೆ ಎದುರಿಸುತ್ತಿದ್ದರೂ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ಮಾಡಿ ಹೇಗೆ ನಿಯಂತ್ರಣ ಮಾಡಬೇಕು ಎಂದು ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅಽಕಾರಿಗಳು ರೋಗ ಹತೋಟಿಗೆ ಸಲಹೆ, ಸೂಚನೆ ನೀಡಬೇಕು. ಜತೆಗೆ ಸಿಂಪಡಣೆ ಮಾಡಬೇಕಾಗಿರುವ ಔಷಧಗಳ ಶಿಫಾರಸು ಮಾಡಬೇಕು ಎಂದರು.
ನಕಲಿ ಬಿತ್ತನೆ ಬೀಜವೂ ಇಳುವರಿ ಕುಂಠಿತಕ್ಕೆ ಕಾರಣವಾಗಿದೆ, ಬಹುರಾಷ್ಟ್ರೀಯ ಕಂಪನಿಗಳು ಬಿತ್ತನೆ ಬೀಜ ಉತ್ಪಾದನೆ ಮಾಡುವುದರಿಂದ ರಾಜ್ಯ ಸರ್ಕಾರಗಳು ಹಿಡಿತ ಸಾಽಸಬೇಕು. ರಾಜ್ಯಕ್ಕೆ ಸರಬರಾಜು ಆಗುವ ಬಿತ್ತನೆ ಬೀಜಗಳ ಗುಣಮಟ್ಟ ಪರಿಶೀಲಿಸಿ ರೈತರಿಗೆ ಸರಬರಾಜು ಮಾಡಿದರೆ ಸಂಕಷ್ಟದಿಂದ ಪಾರು ಮಾಡಬಹುದು ಎಂದು ಹೇಳಿದರು.
ಮಹಾರಾಷ್ಟ್ರ ಛತ್ತೀಸ್‌ಗಢ ರಾಜ್ಯಗಳಲ್ಲಿ ಅಕ್ಟೋಬರ್‌ನಲ್ಲೇ ಟೊಮ್ಯಾಟೊ ಕೊಯ್ಲು ಶುರುವಾಗುತ್ತದೆ. ಅಲ್ಲಿ ಈಗ ಮಳೆ ಆಗುತ್ತಿರುವುದರಿಂದ ಇಳುವರಿ ಕುಂಠಿತಗೊಂಡಿದೆ. ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಹೆಚ್ಚು ಆವಕ ಮಾರುಕಟ್ಟೆಗೆ ಬರುತ್ತಿದ್ದು, ಪ್ರಸ್ತುತ ಯಾಕೆ ಆವಕ ಹೆಚ್ಚಾಗುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಿ ರೈತರನ್ನು ಉತ್ತೇಜಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net