ಸಿನಿಮಾ

ಅಧಿಕಾರಿಗಳದು ಬ್ರಿಟಿಷರ ಮನಸ್ಥಿತಿ – ಮಾಜಿ ಸಚಿವ ಆನಂದಸಿಂಗ್ ಕಿಡಿ

ಹೊಸಪೇಟೆ: ತುಂಗಭದ್ರಾ ಮಂಡಳಿ ಅಧಿಕಾರಿಗಳು ಬ್ರಿಟಿಷರ ಮನಸ್ಥಿತಿ ಹೊಂದಿದ್ದು, ಇಲ್ಲಿನ 1500ಕ್ಕೂ ಹೆಚ್ಚು ಕುಟುಂಬಗಳು ಆತಂಕದಲ್ಲೇ ದಿನ ಕಳೆಯುತ್ತಿವೆ. ಬಡವರಿಗೆ ನಿವೇಶನ ಒದಗಿಸುವಂತೆ ಕೋರಿದರೆ ವ್ಯಾಪಾರಿಗಳಂತೆ ಷರತ್ತುಗಳನ್ನು ವಿಧಿಸುತ್ತಿದ್ದಾರೆ ಎಂದು ಮಾಜಿ ಸಚಿವ ಆನಂದ ಸಿಂಗ್ ತೀವ್ರ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ಮಕ್ಮಲ್ ಟೋಪಿ ಹಾಕಲು ಕಾಂಗ್ರೆಸ್ ಸಿದ್ಧತೆ; ಬಿ.ಎಲ್.ಸಂತೋಷ

ತುಂಗಭದ್ರಾ ಡ್ಯಾಂ ವೈಕುಂಠ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಲಾಶಯ ನಿರ್ಮಾಣ ಸಂದರ್ಭ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ವಿವಿಧೆಡೆಯಿಂದ ಜನರು ಇಲ್ಲಿಗೆ ವಲಸೆ ಬಂದಿದ್ದಾರೆ. ಅನೇಕರು ಇಲ್ಲೇ ನೆಲೆಸಿದ್ದಾರೆ. ಇಂದಿಗೂ ಅವರ ಹೆಸರಲ್ಲಿ ಹಕ್ಕುಪತ್ರಗಳು ವಿತರಣೆಯಾಗಿಲ್ಲ.

ಸ್ಥಳೀಯ ನಿವಾಸಿಗಳಿಗೆ ವಿತರಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಕೇಂದ್ರ ನೀರಾವರಿ ಸಚಿವರೂ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಇಲ್ಲಿನ ಅಧಿಕಾರಿಗಳ ಅಸಹಕಾರದಿಂದ ಹಕ್ಕು ಪತ್ರಗಳ ವಿತರಣೆ ವಿಳಂಬವಾಗುತ್ತಿದೆ ಎಂದು ದೂರಿದರು.

ಮಂಡಳಿ ಅಧೀನದಲ್ಲಿ ಸುಮಾರು 80 ಎಕರೆ ಪ್ರದೇಶವನ್ನು ಬಡವರ ವಸತಿ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಲು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ತುಂಗಭದ್ರಾ ಮಂಡಳಿಯ ಸದಸ್ಯ ನಾರಾಯಣ ರೆಡ್ಡಿ ಹಸ್ತಕ್ಷೇಪದಿಂದ ವಿಳಂಬವಾಗುತ್ತಿದೆ.

ಟಿಬಿ ಬೋರ್ಡ್ ನೀಡುವ 80 ಎಕರೆ ಪ್ರದೇಶಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ತುಂಗಭದ್ರಾ ಎಡ-ಬಲ ಭಾಗದ ಕಾಲುವೆಗಳಿಗೆ ಸಂಬಂಧಿಸಿದ 20 ಸಾವಿರ ಎಕರೆ ಪ್ರದೇಶವನ್ನು ಬೋರ್ಡ್‌ಗೆ ವರ್ಗಾಯಿಸಬೇಕು. 80 ಎಕರೆ ಪ್ರದೇಶಕ್ಕೆ 500 ಕೋಟಿ ರೂ. ಕರ್ನಾಟಕ ಸರ್ಕಾರ ಪಾವತಿಸಬೇಕು ಎಂಬಂತಹ ಅವೈಜ್ಞಾನಿಕವಾದ ಷರತ್ತುಗಳನ್ನು ವಿಧಿಸಲಾಗಿದೆ. ಡ್ಯಾಂ ಕರ್ನಾಟಕದಲ್ಲಿದೆ ಎಂಬುದನ್ನು ಅವರು ಮರೆಯಬಾರದು ಎಂದು ತಾಕೀತು ಮಾಡಿದರು.

ಕ್ವಿಟ್ ಇಂಡಿಯಾ ಮಾದರಿ ಹೋರಾಟ

ತುಂಗಭದ್ರಾ ಜಲಾಶಯ ನಿರ್ಮಾಣ ಸಂದರ್ಭ ಕಾರ್ಮಿಕರು, ಸಿಬ್ಬಂದಿ ಅನುಕೂಲಕ್ಕಾಗಿ ಬಳಕೆಗಾಗಿ ಸಾವಿರಾರು ಎಕರೆ ಭೂಮಿಯನ್ನು ತಾತ್ಕಾಲಿಕವಾಗಿ ಬಿಟ್ಟುಕೊಡಲಾಗಿತ್ತು. ಜಲಾಶಯ ನಿರ್ಮಾಣದವರೆಗೆ ಅದು ಸೀಮಿತವೇ ಹೊರತು ಮಂಡಳಿಗೆ ಮಾಲೀಕತ್ವ ವಹಿಸಿಲ್ಲ. ಅದನ್ನು ಅಧಿಕಾರಿಗಳು, ಬೋರ್ಡ್ ಆಂಧ್ರದ ಸದಸ್ಯರು ಮರೆಯಬಾರದು. ಬೊರ್ಡ್ ಅಧೀನದಲ್ಲಿರುವ ಜಾಗದಲ್ಲಿ ದಶಕಗಳಿಂದ ಕಾರ್ಮಿಕರು ಜೀವನ ಸವೆಸುತ್ತಿದ್ದಾರೆ.

ಅವರ ಹೆಸರಿಗೆ ಪಟ್ಟಾ ನೀಡುವ ಮೂಲಕ ಬಡವರ ಜೀವನಕ್ಕೆ ಆಸರೆಯಾಗುವಂತೆ ಕೋರಿದರೆ ನಾರಾಯಣ ರೆಡ್ಡಿ ಷರತ್ತುಗಳನ್ನು ಪ್ರಸ್ತಾಪಿಸುತ್ತಿರುವುದೆ ಭೂಮಿ ಹಸ್ತಾಂತರಕ್ಕೆ ತೊಡಕಾಗಿದೆ. ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳಿಂದ ಯಾವುದೇ ಸಮಸ್ಯೆ ಇಲ್ಲ. ಹಕ್ಕು ಪತ್ರ ವಿತರಣೆಗೆ ಶೇ.99 ಪ್ರಕ್ರಿಯೆಗಳು ಮುಗಿದಿದ್ದು, ಸಣ್ಣಪುಟ್ಟ ಸಮಸ್ಯೆಗಳಿಂದಾಗಿ ವಿಳಂಬವಾಗುತ್ತಿದೆ.

ಬೋರ್ಡ್‌ನ ನಾಮನಿರ್ದೇಶಿತ ಸದಸ್ಯರ ಷರತ್ತುಗಳು, ಅಧಿಕಾರಿಗಳ ಜನವಿರೋಧಿ ಧೋರಣೆ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕೇಂದ್ರ ಸರ್ಕಾರದ ಮೂಲಕ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಸ್ಪಂದಿಸದಿದ್ದರೆ, ಕ್ವಿಟ್ ಇಂಡಿಯಾ ಮಾದರಿಯಲ್ಲಿ ಟಿಬಿ ಬೋರ್ಡ್ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಪರಾಜಿತ ಅಭ್ಯರ್ಥಿ ಸಿದ್ಧಾರ್ಥ ಸಿಂಗ್, ನಗರಸಭೆ ಸದಸ್ಯ ಹನುಮಂತಪ್ಪ, ಬಿಜೆಪಿ ಪ್ರಮುಖರಾದ ಧಮೇಂದ್ರ ಸಿಂಗ್ ಇತರರಿದ್ದರು.

ಬಡವರ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ. ಬೋರ್ಡ್ ವ್ಯಾಪ್ತಿಯ ಜನರಿಗೆ ಹಕ್ಕುಪತ್ರ ಒದಗಿಸಬೇಕೆಂಬ ನಮ್ಮ ಹೋರಾಟದ ಮೇಲೆ ಚುನಾವಣಾ ಫಲಿತಾಂಶ ಪ್ರಭಾವ ಬೀರದು. ಅಧಿಕಾರ ಇರಲಿ, ಇಲ್ಲದೇ ಇರಲಿ ಹೋರಾಟ ನಿಲ್ಲದು. ನಮ್ಮದು ಕಂಟೆಂಟ್ ವಿತ್ ಕಮಿಟ್‌ಮೆಂಟ್ ರಾಜಕಾರಣ. ಇದರಲ್ಲಿ ರಾಜಿಯಾಗುವ ಪ್ರಶ್ನೆಯಿಲ್ಲ.
| ಆನಂದ ಸಿಂಗ್, ಮಾಜಿ ಸಚಿವ

Latest Posts

ಲೈಫ್‌ಸ್ಟೈಲ್