

ಒಡಿಶಾ: ಸೋಮವಾರ (ನಾಳೆ) ಅಯೋಧ್ಯಾ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ದೇಶದ ಮೂಲೆ-ಮೂಲೆಗಳಲ್ಲಿ ರಾಮಜಪ ಜೋರಾಗುತ್ತಿದೆ. ಕೋಟ್ಯಾಂತರ ಭಕ್ತ ಸಮೂಹ ಭಕ್ತಿ ಭಾವೈಕ್ಯತೆಯಲ್ಲಿ ಮುಳುಗುತ್ತಿದೆ. ಇನ್ನು ಒಡಿಶಾದ ಬರ್ಹಾಂಪುರದ ಕಲಾವಿದರೊಬ್ಬರ ವಿಶಿಷ್ಟ, ವಿಭಿನ್ನ ಸೇವೆ ಇಡೀ ದೇಶದ ಗಮನ ಸೆಳಿಯುತ್ತಿದೆ.
ಕಲಾವಿದ ಕೆ.ಬಿಜಯ್ ಕುಮಾರ್ ರೆಡ್ಡಿ ಎಂಬುವವರು ಚಾಕ್ ಪೀಸ್‌ನಲ್ಲಿ 3 ಸೆಂ.ಮೀ ಎತ್ತರದ ಭಗವಾನ್ ಶ್ರೀರಾಮ ಮತ್ತು 2.5 ಸೆಂ.ಮೀ ಎತ್ತರದ ಪ್ರಧಾನಿ ಮೋದಿ ಇರುವ ವಿಗ್ರಹವನ್ನು ಕೆತ್ತುವ ಮೂಲಕ ವಿಭಿನ್ನ ರೀತಿಯಲ್ಲಿ ರಾಮನ ಬಗೆಗಿನ ಪ್ರೀತಿಯನ್ನು ತೋರಿಸಿದ್ದಾರೆ. ಕಲಾವಿದ ಸಾಧನೆಗೆ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಕಲಾಕೃತಿಗಳನ್ನು ಕೆತ್ತಿರುವ ರೆಡ್ಡಿ ಅವರಿಗೆ ಬಾಲರಾಮನ ಕೆತ್ತನೆ ಬಹಳ ವಿಶೇಷವಂತೆ. ಚಾಕ್ ಪೀಸ್‌ನಲ್ಲಿ 3 ಸೆಂ.ಮೀ ಎತ್ತರದ ಭಗವಾನ್ ಶ್ರೀರಾಮ ಕೆತ್ತಲು ಒಂದು ದಿನ ಬೇಕಾಯಿತು ಎಂದು ಕಲಾವಿದ ಹೇಳಿದ್ದಾನೆ. ಅಲ್ಲದೆ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.
ಕಲಾವಿದ ಕೆ.ಬಿಜಯ್ ಕುಮಾರ್ ರೆಡ್ಡಿ ಗಮನಾರ್ಹ ಪ್ರತಿಭೆಗೆ ಪ್ರಧಾನಿ ಮೋದಿ, ಉಪ ರಾಷ್ಟ್ರಪತಿಗಳು ಸೇರಿದಂತೆ ಹಲವು ಮಹಾನ್ ಸಾಧಕರಿಂದಲೂ ಬೇಷ್ ಎನಿಸಿಕೊಂಡಿದ್ದಾರೆ.