ಚೆನ್ನಾಗಿದೆ ಅಂತಾ ಪುಟ್ಟ ಪ್ರಾಣಿಯ ಜತೆ ಪೋಸ್​ ಕೊಟ್ಟ ಮಹಿಳೆ ಅದರ ಹಿನ್ನೆಲೆ ತಿಳಿದು ಬೆಚ್ಚಿಬಿದ್ದಳು!

Octopus
Published on

ನವದೆಹಲಿ: ಈ ಮಹಿಳೆಯ ಅದೃಷ್ಟ ತುಂಬಾನೇ ಚೆನ್ನಾಗಿತ್ತು ಅಂತಾ ಕಾಣಿಸುತ್ತದೆ. ಏಕೆಂದರೆ ಕ್ಯಾಮೆರಾಗೆ ಪೋಸ್​ ನೀಡಲು ತನ್ನ ಅಂಗೈನಲ್ಲಿ ಇಟ್ಟುಕೊಂಡಿದ್ದ ಸಣ್ಣದಾದ ಸಮುದ್ರ ಜೀವಿಯ ಪರಿಚಯ ಮಾಡಿಕೊಂಡ ಮಹಿಳೆಗೆ ಒಂದು ಕ್ಷಣ ಎದೆ ಝಲ್​ ಎಂದಿದೆ. ಮನಸಲ್ಲೇ ಅಯ್ಯೋ ಬದುಕಿತು ಬಡಜೀವ ಅಂದುಕೊಂಡಿರುತ್ತಾಳೆ. ಏಕೆಂದರೆ ಆಕೆ ಹಿಡಿದುಕೊಂಡಿದ್ದು ವಿಶ್ವದಲ್ಲೇ ಅತಿ ಅಪಾಯಕಾರಿಯಾದ ಪ್ರಾಣಿ ಎಂಬುದು ಆಕೆಗೆ ತಿಳಿಯುತ್ತದೆ.

ಕೈಲಿನ್​ ಮೇರಿ ಎಂಬಾಕೆ ಸಣ್ಣ ಅಕ್ಟೋಪಸ್ ಅನ್ನು ತನ್ನ ಅಂಗೈನಲ್ಲಿ ಇಟ್ಟುಕೊಂಡಿರುವ ಫೋಟೋ ಜಾಲತಾಣದಲ್ಲಿ ವೈರಲ್​ ಆಗಿದೆ. ಕಂದು ಬಣ್ಣದ ದೇಹ ಮತ್ತು ಕಪ್ಪು ವೃತ್ತಗಳನ್ನು ಹೊಂದಿರುವ ಅಕ್ಟೋಪಸ್​ ನೋಡಲು ತುಂಬಾ ಚಿಕ್ಕದಾಗಿದೆ. ಹಾಗಂತ ಅದನ್ನು ನಿರ್ಲಕ್ಷಿಸಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ.

ಅಕ್ಟೋಪಸ್​ ಅನ್ನು ಕೈಯಲ್ಲಿ ಇಟ್ಟುಕೊಂಡು ಫೋಟೋವನ್ನು ತೆಗೆದು ತನ್ನ ಜಾಲತಾಣ ಖಾತೆಯಲ್ಲೂ ಮೇರಿ ಪೋಸ್ಟ್​ ಮಾಡಿದ್ದಾಳೆ. ಆ ಮೇಲೆ ಆ ಜೀವಿಯ ಬಗ್ಗೆ ಬಂದಂತಹ ಮಾಹಿತಿ ನೋಡಿ ಆಕೆ ಬೆಚ್ಚಿಬಿದ್ದಿದ್ದಾಳೆ. ಆಕೆ ಹಿಡಿಕೊಂಡಿದ್ದು ಬ್ಲೂ ರಿಂಗ್ಡ್​ ಅಕ್ಟೋಪಸ್​. ಇದನ್ನು ಸಮುದ್ರದ ಅತ್ಯಂತ ಅಪಾಯಕಾರಿ ಪ್ರಾಣಿಯೆಂದೇ ಪರಿಗಣಿಸಲಾಗಿದೆ.

ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದರೂ ತನ್ನ ಒಡಲಾಳದಲ್ಲಿ ಭಾರಿ ವಿಷವನ್ನು ಈ ಜೀವಿ ತುಂಬಿಕೊಂಡಿದೆ. ಇದರ ವಿಷ ಕೆಲವೇ ನಿಮಿಷಗಳಲ್ಲಿ 26 ವಯಸ್ಕರನ್ನು ಕೊಲ್ಲುವಷ್ಟು ಅಪಾಯಕಾರಿಯಾಗಿದೆ. ಇವು ಕಚ್ಚುವುದು ಗೊತ್ತಾಗುವುದಿಲ್ಲ ಮತ್ತು ಕಚ್ಚಿದಾಗ ನೋವು ಸಹ ಆಗುವುದಿಲ್ಲ. ಅನೇಕ ಬಲಿಪಶುಗಳು ಉಸಿರಾಟದ ತೊಂದರೆ ಮತ್ತು ಪಾರ್ಶ್ವವಾಯು ಪ್ರಾರಂಭವಾಗುವವರೆಗೂ ತಾವು ಈ ಜೀವಿಯ ಕಡಿತಕ್ಕೆ ಒಳಗಾಗಿದ್ದೇವೆ ಎಂಬುದು ಗೊತ್ತಾಗುವುದೇ ಇಲ್ಲ.

ವಿಡಿಯೋ ಅಪ್​ಲೋಡ್​ ಮಾಡಿರುವ ಮೇರಿ, "ಬಾಲಿಗೆ ಹೋಗಿ ಗೊತ್ತಿಲ್ಲದೇ ಅತ್ಯಂತ ಅಪಾಯಕಾರಿ ಪ್ರಾಣಿಯನ್ನು ಹಿಡಿದುಕೊಂಡೆ. ಮೂರು ಗಂಟೆಗಳ ಬಳಿಕ ನಮ್ಮ ತಂದೆಯನ್ನು ಕರೆದು ಭಯದಿಂದ ಕಣ್ಣೀರಿಟ್ಟೆ." ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಅನೇಕ ನೆಟ್ಟಿಗರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಜಕ್ಕೂ ನಾವು ಕೂಡ ಇದರ ಬಗ್ಗೆ ತಿಳಿದು ಶಾಕ್​ ಆದೆವು ಎಂದು ಹೇಳಿದ್ದಾರೆ.

ಬ್ಲೂ ರಿಂಗ್ಡ್​ ಅಕ್ಟೋಪಸ್​ 12 ರಿಂದ 20 ಸೆ.ಮೀ ಇರುತ್ತದೆ. ಇದನ್ನು ಹ್ಯಾಂಡಲ್​ ಮಾಡುವಾಗ ಪ್ರಚೋದನೆ ಮಾಡಿದ್ದಲ್ಲಿ ಮಾನವನ ಜೀವಕ್ಕೆ ತುಂಬಾ ಅಪಾಯಕಾರಿ. ಹೀಗಿರುವಾಗ ಅದನ್ನು ಹಿಡಿಕೊಂಡು ಫೋಟೋಗೆ ಪೋಸ್​ ನೀಡಿರುವ ಮೇರಿ ತುಂಬಾ ಅದೃಷ್ಟವಂತೆ ಎನ್ನಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net