

ಬೆಂಗಳೂರು: ಹಿಂದುಳಿದ ವರ್ಗಗಳ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಲಹಾ ಸಮಿತಿ ನಿಲ್ಲಲಿದೆ ಎಂದು ಸಮಿತಿ ಸಂಚಾಲಕ ಡಾ.ಅನಿಲ್ ಜೈ ಹಿಂದ್ ಹೇಳಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಒಬಿಸಿ ಸಲಹಾ ಸಮಿತಿ ಸಭೆಯ ಬಳಿಕ ಡಾ. ಅನಿಲ್ ಜೈ ಹಿಂದ್ ಮತ್ತು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕಾಂಗ್ರೆಸ್ನಲ್ಲಿ ಒಬಿಸಿಗೆ ಸೇರಿದ ಏಕೈಕ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಅವರನ್ನು ಬದಲಾಯಿಸುವ ಚರ್ಚೆ ಇರುವುದಾಗಿ ಸುದ್ದಿಗಾರರು ಅನಿಲ್ ಜೈ ಹಿಂದ್ಗೆ ನೇರ ಪ್ರಶ್ನೆ ಕೇಳಿದರು. ಈ ವೇಳೆ ಸಿದ್ದರಾಮಯ್ಯ, ನಗು ಮುಖದಲ್ಲಿ ಮೈಕನ್ನು ತನ್ನ ಪಕ್ಕದಲ್ಲಿಯೇ ಕುಳಿತಿದ್ದ ಡಾ. ಅನಿಲ್ ಜೈ ಹಿಂದ್ಗೆ ಹಸ್ತಾಂತರಿಸಿದರು.
ಉತ್ತರಿಸಲು ತಡಬಡಾಯಿಸಿದ ಅನಿಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗದ ಪರ ಗಟ್ಟಿಯಾಗಿ ನಿಂತಿದ್ದಾರೆ. ಒಬಿಸಿಗೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ನಾವೆಲ್ಲಾ ಸಿದ್ದರಾಮಯ್ಯ ಪರವಾಗಿದ್ದೇವೆ. ಹೈಕಮಾಂಡ್ ಕಡೆಯಿಂದಲೂ ಇದೇ ಉತ್ತರ ಬರಲಿದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ, ಈ ವೇದಿಕೆಯಲ್ಲಿ ಸಿಎಂ ಬದಲಾವಣೆ ಚರ್ಚೆ ಬೇಡ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.
ಅಷ್ಟೊತ್ತಿಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು, ಈಗಾಗಲೇ ಹೈಕಮಾಂಡ್ ನಾಯಕತ್ವ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದೆ. ಇದರ ಜತೆಗೆ ಸಿದ್ದರಾಮಯ್ಯ, ನಾನೇ 5 ವರ್ಷ ಸಿಎಂ ಎಂದು ಪ್ರತಿಪಾದನೆ ಮಾಡಿದ್ದು, ಅದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಮತ ನೀಡಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಹಲವು ಬಾರಿ ಪ್ರತಿಕ್ರಿಯಿದ್ದೇನೆ. ಆದರೆ, ಮುಂದಿನದ್ದೆಲ್ಲವೂ ಹೈಕಮಾಂಡ್ ನಿರ್ಧಾರ. ಅದನ್ನು ನಾನು, ಡಿ.ಕೆ.ಶಿವಕುಮಾರ್ ಕೂಡ ಒಪ್ಪಬೇಕು.
ಸಿದ್ದರಾಮಯ್ಯ, ಮುಖ್ಯಮಂತ್ರಿ