

ಪ್ರಶ್ನೆ: ನಾನು ನಾಲ್ಕು ವರ್ಷದ ಹುಡುಗನಾಗಿದ್ದಾಗ ನಮ್ಮ ತಾಯಿ ತೀರಿಕೊಂಡರು. ನಮ್ಮ ತಂದ ಇನ್ನೊಂದು ಮದುವೆ ಮಾಡಿಕೊಂಡರು. ಆ ಮದುವೆಯಿಂದ ಅವರಿಗೆ ಎರಡು ಮಕ್ಕಳು ( ಒಂದು ಗಂಡು ಒಂದು ಹೆಣ್ಣು ಮಗು ಇದೆ). ನನ್ನನ್ನು ನಮ್ಮ ತಾಯಿಯ ತಂಗಿ ಕರೆದುಕೊಂಡು ಬಂದು ಸಾಕಿದರು. ನಮ್ಮ ತಂದೆಗೆ ಅವರ ತಂದೆಯಿಂದ ಪ್ಲಾಂಟೇಷನ್ ಜಮೀನು ಐದು ಎಕರೆ ಬಂದಿದೆ. ನನಗೆ ಭಾಗ ಕೊಡಿ ಎಂದು ಕೇಳಿದರೆ ಅವರು ಒಂದು ಎಕರೆ ಮಾತ್ರ ಕೊಡುತ್ತೇನೆ ಎನ್ನುತ್ತಿದ್ದಾರೆ. ನನಗೆ ಸರಿಯಾದ ಭಾಗ ಎಷ್ಟು ಬರುತ್ತದೆ ? ಅದು ಬರಲು ನಾನು ಏನು ಮಾಡಬೇಕು ಎಂದು ತಿಳಿಸಿ.
ಉತ್ತರ: ನಿಮ್ಮ ತಂದೆಗೆ ಅವರ ತಂದೆಯಿಂದ ಬಂದ ಆಸ್ತಿ ನಿಮ್ಮ ತಂದೆ ಪ್ರತ್ಯೇಕ ಆಸ್ತಿ ಆಗುತ್ತದೆ. ಅದರಲ್ಲ ಅವರು ನಿಮಗೆ ಭಾಗ ಕೊಡಲೇ ಬೇಕೆಂದು ಇಲ್ಲ. ಅವರು ಆ ಆಸ್ತಿಯನ್ನು ಹಾಗೇ ಉಳಿಸಿ ತೀರಿಕೊಂಡರೆ ಆಗ ನಿಮಗೆ ನಿಮ್ಮ ಚಿಕ್ಕಮ್ಮನಿಗೆ, ಮತ್ತು ನಿಮ್ಮ ತಮ್ಮ ಮತ್ತು ತಂಗಿಗೆ ತಲಾ ನಾಲ್ಕನೇ ಒಂದು ಭಾಗ ಅಂದರೆ ಪ್ರತಿ ಒಬ್ಬರಿಗೂ ( ಒಂದು ಎಕರೆ 10 ಗುಂಟೆ) ಬರುತ್ತದೆ.
ಹೀಗಾಗಿ ಅವರು ಬದುಕಿರುವಾಗ ಕೊಟ್ಟಿದ್ದನ್ನು ಒಪ್ಪಿಕೊಳ್ಳುವುದು ಒಳ್ಳೆಯದು. ಅವರು ನಿಮಗೆ ಏನೂ ಕೊಡದಿದ್ದರೂ ನೀವು ಅವರ ಮೇಲೆ ಕೇಸು ಹಾಕಿದರೆ ಪ್ರಯೋಜನ ಆಗುವುದಿಲ್ಲ. ಬದಲಿಗೆ ಮಧ್ಯಸ್ಥಿಕೆ ಮಾಡಿಸಿ ಸ್ವಲ್ಪ ಹೆಚ್ಚು ಭಾಗ ಕೊಡುವಂತೆ ಮಾಡಬಹುದೇ ಎಂದು ಯೋಚಿಸಿ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ. ವಿಷಯ “ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವುದು, ಉಳಿಸಿಕೊಳ್ಳುವುದು ಬೆಳೆಸಿಕೊಳ್ಳುವುದು ಮತ್ತು ಸಂಬಂಧಗಳ ಜೊತೆ ಬೆಸೆಯುವುದು”