ಡಬ್ಬಿಯಲ್ಲಿ ಮುಚ್ಚಿಟ್ಟ ಹಾಗೆ ಇರು ಎನ್ನುತ್ತಾರೆ ಪತಿ- ಜೀವನ ಸಾಕುಸಾಕಾಗಿದೆ, ಏನು ಮಾಡಲಿ?

nyayadevate1
Published on
ಪ್ರಶ್ನೆ: ನನಗೆ ಮದುವೆ ಆಗಿ ಹದಿಮೂರು ವರ್ಷಗಳಾಗಿದೆ. ಎಂಟು ವರ್ಷದ ಮಗಳೂ ಇದ್ದಾಳೆ. ನಾನು ಡಬಲ್ ಗ್ರಾಜುಯೇಟ್ ಹಾಗೂ ತುಂಬಾ ಬುದ್ಧಿವಂತೆ. ನನ್ನ ಗಂಡ ನನ್ನನ್ನು ಇಷ್ಟ ಪಟ್ಟು ಮದುವೆ ಆಗಿದ್ದರು. ನನ್ನ ತಾಯಿ ವಿಧವೆ. ನಮ್ಮ ತಾಯಿ ಹಾಗೂ ನಮ್ಮ ಕುಟುಂಬದವರ ಜೊತೆ ಇರಲು ಒಪ್ಪಿದರು. ಆ ಒಂದೇ ಕಾರಣಕ್ಕೆ ನಾನು ಅವರಿಗೆ ಸೋಲುತ್ತಾ ಬಂದೆ. ಆದರೆ ಇತ್ತೀಚೆಗೆ ಅವರ ಕಿರುಕುಳ ಹೆಚ್ಚುತ್ತಾ ಬಂದಿದೆ. ಮನೆಯಿಂದಲೇ ಕೆಲಸ ಮಾಡುತ್ತೇನೆ ಎಂದು ಹೇಳಿ ಮನೆಯಲ್ಲೇ ನಾಲ್ಕೈದು ವರ್ಷಗಳಿಂದ ಇರುತ್ತಾರೆ. ಅವರಿಗೆ ಎರಡು ಲಕ್ಷದವರೆಗೆ ಸಂಬಳ ಬರುತ್ತಿದೆ. ಆದರೆ ಒಂದೊಂದು ರೂಪಾಯಿ ಕೊಡಲು ಪ್ರಾಣ ಹಿಂಡುತ್ತಾರೆ. ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ತಲೆ ದೂರಿಸುತ್ತಾರೆ. ಅವರು ಹೇಳಿದಂತೆಯೇ ಮನೆಯವರೆಲ್ಲಾ ಕೇಳಬೇಕು ಎಂದು ಬಯಸುತ್ತಾರೆ. ಮನೆಯವರನ್ನೆಲ್ಲಾ ಕಂಡಂ ಮಾಡಿ ಹೀಯಾಳಿಸಿ ಮಾತಾಡುತ್ತಾರೆ. ತನ್ನ ಮಾತೇ ನಡೆಯಬೇಕು ಎನ್ನುವ ಆವೇಶದಲ್ಲಿ ಕಿರುಚಾಡಿ ಎಲ್ಲರನ್ನೂ ಕೆಟ್ಟ ಕೆಟ್ಟ ಪದಗಳಿಂದ ಬೈದಾಡುತ್ತಾರೆ. ನಮ್ಮ ತಾಯಿಯ ಮೇಲೆ ನನ್ನ ಮೇಲೆ ಕೈಮಾಡುತ್ತಾರೆ. ನಾನು ಕೆಲಸಕ್ಕೂ ಹೋಗಗೊಡುವುದಿಲ್ಲ. ನನ್ನ ಹತ್ತಿರ ಬಿಡಿಗಾಸೂ ಇಲ್ಲ. ನಾನು ಒಳ್ಳೆಯ ಬಟ್ಟೆ ಹಾಕಿಕೊಳ್ಳಲೂ ಬಿಡುವುದಿಲ್ಲ. ನೀನು ಡಬ್ಬಿಯಲ್ಲಿ ಮುಚ್ಚಿಟ್ಟ ಹಾಗೆ ಇರಬೇಕು ಎನ್ನುತ್ತಾರೆ. ನಾನು ಹೊರಗಿನ ಗಾಳಿ ಬೆಳಕು ನೋಡಲೂ ಬಿಡುವುದಿಲ್ಲ. ತನ್ನ ಜೊತೆಗೂ ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ. ನಾನು ಫೋನಿನಲ್ಲೂ ಯಾರ ಹತ್ತಿರವೂ ಮಾತಾಡಲೂ ಬಿಡುವುದಿಲ್ಲ. ನನಗೆ ಸಾಯಬೇಕೆನ್ನಿಸುತ್ತಿದೆ. ನನಗೆ ಏನಾದರೂ ದಾರಿ ಇದೆಯೇ? ಈ ನರಕದಿಂದ ನಾನು ಹೇಗೆ ಹೊರಬರಬೇಕು ತಿಳಿಸಿ.

ಉತ್ತರ: ಪತಿಯನ್ನು ಅನುಸರಿಸಿ ಬಾಳುವೆ ಮಾಡುವುದು ಒಳ್ಳೆಯದೇ. ಆದರೆ ಪತಿಯ ದೌರ್ಜನ್ಯಕ್ಕೆ ನಾವು ಒಂದು ವಸ್ತುವಾಗಿ ಬದುಕುತ್ತೇವೆ. ಅವರಿಗೆ ವಿಕೃತ ಸಂತೋಷ ಸಿಕ್ಕಲು ನಾವು ಸಹಕಾರ ಮಾಡುತ್ತೇವೆ ಎನ್ನುವಂತೆ ನೀವು ಬದುಕುವುದಾದರೆ ಅದು ಮಾನವೀಯತೆಗೇ ನೀವು ಮಾಡುತ್ತಿರುವ ಅವಮಾನ. ಮುಂದೆ ಬಗ್ಗಿ ಆಗಾಗ ಕೆಲವರಿಗೆ ಜೀವನದಲ್ಲಿ ನಮಸ್ಕಾರ ಹಾಕಬಹುದು. ಬೇರೆಯವರನ್ನು ಸಂತೋಷ ಪಡಿಸಲು ಹಿಂದೆ ಬಗ್ಗಿ ನಮಸ್ಕಾರ ಹಾಕಲು ಹೋದರೆ ಬೆನ್ನು ಮೂಳೆ ಮುರಿಯುತ್ತದೆ . ಎಚ್ಚರವಿರಲಿ.

ನೀವು ಧೈರ್ಯವಾಗಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ಪ್ರಕರಣ ದಾಖಲಿಸಿ. ನಿಮ್ಮ ಪತಿಯಿಂದ ನಿಮಗೆ ಆಗುತ್ತಿರುವ ಹಿಂಸೆಯನ್ನೆಲ್ಲ ವಿವರಿಸಿ. ಆತ ನಿಮ್ಮ ಮನೆಗೆ ಬರಬಾರೆದನ್ನುವ ಆದೇಶವನ್ನೂ ಪಡೆಯಿರಿ. ನಿಮಗೆ ಮುಂದುವರೆದ ಹಿಂಸೆ ಮಾಡಬಾರದೆಂದು ರಕ್ಷಣೆಯ ಆದೇಶವನ್ನೂ ಪಡೆಯಿರಿ. ಹಾಗೆಯೇ ಕೌಟುಂಬಿಕ ನ್ಯಾಯಾಲಯದಲ್ಲಿ ನಿಮಗೂ ನಿಮ್ಮ ಮಗಳಿಗೂ ಜೀವನಾಂಶ ಬೇಕೆಂದು ಪ್ರಕರಣ ದಾಖಲಿಸಿ. ಕೇಸು ನಡೆಯುವವರೆಗೆ ಮಧ್ಯಂತರ ಜೀವನಾಂಶ ಕೊಡಿಸಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಹಾಕಿ. ನಿಮ್ಮ ಪತಿಯ ಸಂಬಳದಲ್ಲಿ ಮೂರನೇ ಒಂದು ಭಾಗದಿಂದ ಐದನೇ ಒಂದು ಭಾಗದವರೆಗೆ ಯಾವುದೋ ಒಂದು ಮೊತ್ತದ ಹಣ ನಿಮಗೆ ಜೀವನಾಂಶದ ರೂಪದಲ್ಲಿ ಕೊಡುವಂತೆ ನ್ಯಾಯಾಲಯ ಆದೇಶ ಮಾಡುತ್ತದೆ. ಕೇಸು ದಾಖಲಿಸಿದ ಮೊದಲ ಎರಡು ಮೂರು ತಿಂಗಳಿಗೆ ನಿಮ್ಮ ಸಂಸಾರ ನಡೆಸಲು ಯಾರಾದರೂ ಸಹಾಯ ಮಾಡಲು ಸಿದ್ಧರಿದ್ದರೆ ನೀವು ಹೆದರದೇ ಕೇಸು ಹಾಕಿ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ. ವಿಷಯ "ಮೌಲ್ಯಗಳ ಸೇರ್ಪಡೆ’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net