ಸಂತಸದಾಯಕ ಕಲಿಕೆಯಿಂದ ಶಿಕ್ಷಣದ ಮೇಲೆ ಒಲವು : ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹೇಳಿಕೆ

New Project (35)
Published on

ಬಂಟ್ವಾಳ: ಶಿಕ್ಷಣ ಮಗುವಿನಲ್ಲಿ ಆಸಕ್ತಿ ಬೆಳೆಸುವಂತೆ ಇದ್ದಾಗ ಮಗು ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಸಂತಸದಾಯಕ ಕಲಿಕೆಯಿಂದ ಶಿಕ್ಷಣದ ಮೇಲೆ ಒಲವು ಮೂಡುತ್ತದೆ. ಕಲಿಕೆ ಮಗುವಿನಲ್ಲಿ ಹಬ್ಬದ ಭಾವನೆ ಮೂಡಿಸುವಂತಿರಬೇಕು. ನಲಿಯುತ್ತಾ ಕಲಿತಾಗ ಶಿಕ್ಷಣದ ಆಸಕ್ತಿ ಉಂಟುಮಾಡುತ್ತದೆ ಎಂದು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹೇಳಿದರು.

ಮಂಗಳವಾರ ಬೊಂಡಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳ ಸಮೂಹ ಸಂಪನ್ಮೂಲ ಕೇಂದ್ರ, ಬೊಂಡಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ನಡೆದ ಮೂಲ ಸಾಕ್ಷರತಾ, ಸಂಖ್ಯಾ ಜ್ಞಾನದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸೇವೆ ಸಲ್ಲಿಸುತ್ತಿರುವ ಉದ್ಯಮಿ ಜನಾರ್ದನ ದಂಪತಿಯನ್ನು ಗೌರವಿಸಲಾಯಿತು. ಬಂಟ್ವಾಳ ನಗರ ಕ್ಲಸ್ಟರ್‌ನ 110 ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ನಾಗರತ್ನ, ಕ್ಲಸ್ಟರ್ ಸಂಪನ್ಮೂಲ ಕೇಂದ್ರ ಸುಧಾಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್, ಹಿಂದುಳಿದ ವರ್ಗ ಬಾಲಕರ ವಸತಿ ನಿಲಯದ ಪಾಣೆಮಂಗಳೂರು ವಿಶ್ವನಾಥ್, ಬಿಐಈಆರ್‌ಟಿ ರವೀಂದ್ರ, ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ವಿನೋದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರೇಖಾ ಸಿ.ಎಚ್. ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ನಾಗರತ್ನ ಮಾತನಾಡಿದರು. ಶಿಕ್ಷಕಿಯರಾದ ಲಾವಣ್ಯ, ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಭವ್ಯಾ ಕಿಶೋರಿ ವಸಂತ್ ಅಂಚನ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net