ಪರಿಸರ ಸಂರಕ್ಷಣೆಯಲ್ಲಿ ಎನ್‌ಎಸ್‌ಎಸ್ ಪಾತ್ರ ಮಹತ್ವದ್ದು

Environment Day in ATNCC
ಎಟಿಎನ್‌ಸಿ ಕಾಲೇಜಿನ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸಸಿ ನೆಟ್ಟರು. ಸ್ನೇಹಲ್ ಲೋಖಂಡೆ, ಡಾ. ನಾಗರಾಜ ಪರಿಸರ, ಪ್ರೊ.ಪಿ.ಆರ್. ಮಮತಾ, ಪ್ರೊ. ಕೆ.ಎಂ.ನಾಗರಾಜು, ಪ್ರೊ. ಎಸ್.ಜಗದೀಶ್, ಪ್ರೊ. ಎನ್.ಮಂಜುನಾಥ ಇದ್ದರು.
Published on

ಶಿವಮೊಗ್ಗ: ಮನುಷ್ಯ ಬದುಕಲು ಅನಿವಾರ್ಯವಾಗಿರುವ ಮೂಲ ಅವಶ್ಯಕಗಳು ಸಿಗುವುದೇ ಪರಿಸರದಿಂದ. ಹೀಗಾಗಿ ಸುಸ್ಥಿರ ಬದುಕಿಗೆ ಪರಿಸರವನ್ನು ಸಂಕ್ಷಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ನಗರದ ಎಟಿಎನ್‌ಸಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಿಂದ ಬುಧವಾರ ಕುವೆಂಪು ವಿವಿಮಟ್ಟದ ಅಂತರ ಕಾಲೇಜು ಶಿಬಿರದಲ್ಲಿ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಎನ್ನುವುದು ಸಾಮೂಹಿಕ ಜವಾಬ್ದಾರಿ ಮಾತ್ರವಲ್ಲದೆ ಪ್ರತಿಯೊಬ್ಬರ ಹೊಣೆಗಾರಿಕೆಯೂ ಆಗಿದೆ. ಪರಿಸರ ಸಂರಕ್ಷಣೆಯಲ್ಲಿ ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಪಾತ್ರ ಮಹತ್ವದ್ದು ಎಂದರು.
ಪರಿಸರ ಸಂರಕ್ಷಣೆಗೆ ನಾವು ಸ್ವಯಂಪ್ರೇರಿತರಾಗಿ ಗಿಡ, ಮರಗಳನ್ನು ಬೆಳೆಸಬೇಕಿದೆ. ಇದು ಸದ್ಯ ಆಗಬೇಕಾದ ತುರ್ತು ಕಾರ್ಯವಾಗಿದೆ. ಆಪ್ತರ ಸಂತೋಷದ ಕ್ಷಣಗಳಿಗೆ ಕಾರಣರಾಗಲು ನಾವು ಸವಿನೆನಪಿಗಾಗಿ ಉಡುಗೂರೆ ನೀಡುತ್ತೇವೆ. ಇದರ ಜತೆಗೆ ಪರಿಸರಕ್ಕೆ ಪೂರಕವಾಗುವಂತೆ ಒಂದು ಗಿಡ ನೆಟ್ಟು ಪೋಷಿಸಿದಾಗ ಪರಿಸರ ಸಂರಕ್ಷಣೆಗೆ ವೈಯಕ್ತಿಕ ಜವಾಬ್ದಾರಿ ಮೆರೆದಂತೆ ಆಗುತ್ತದೆ. ಪ್ರತಿ ಮನೆಗಳಲ್ಲಿ ಒಂದು ಗಿಡ ನೆಟ್ಟರೆ ಸಾಕು, ತನ್ನಿಂತಾನೆ ಊರಿನಲ್ಲಿ ವನ ಸೃಷ್ಟಿಯಾಗುತ್ತದೆ ಎಂದರು.
ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಬಿಸಾಡುವುದರಿಂದ ಅದು ಕಸವಾಗಿ ಮಾರ್ಪಟ್ಟು ಪರಿಸರಕ್ಕೆ ಹಾನಿಯಾಗುತ್ತದೆ. ಅದ್ದರಿಂದ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಅನಿವಾರ್ಯವಾಗಿ ಬಳಕೆ ಮಾಡಿದರೂ ಪುನರ್ ಬಳಕೆಯಂತಹ ಪ್ಲಾಸ್ಟಿಕ್ ಬಳಸಬೇಕು. ಇದರಿಂದ ಪರಿಸರ ಹಾನಿಯನ್ನು ಆಂಶಿಕವಾಗಿ ಕಡಿಮೆ ಮಾಡಬಹುದು ಎಂದು ತಿಳಿಸಿದರು.
ಮರುಬಳಕೆ ಜತೆಗೆ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ಮೂಲಕ ಪರಿಸರ ಪ್ರಜ್ಞೆ ಮೆರೆಯಬಹುದು. ಕಾಂಪೋಸ್ಟ್ ಪ್ರಕ್ರಿಯೆಯೂ ಪರಿಸರಕ್ಕೆ ಪೂರಕ. ಮನೆಯ ಮುಂದೆ ಗುಂಡಿ ತೋಡಬೇಕು. ಅದಕ್ಕೆ ಬೇರ್ಪಡಿಸಿದ ಹಸಿ, ಒಣ ಕಸವನ್ನು ತ್ಯಾಜ್ಯ ಗುಂಡಿಯಲ್ಲಿ ಹಾಕುವುದರಿಂದ ಅದು ಕೆಲವು ದಿನಗಳ ಬಳಿಕ ಗೊಬ್ಬರವಾಗುತ್ತದೆ. ಅದನ್ನು ಕೃಷಿಗೆ ಬಳಕೆ ಮಾಡಬಹುದು ಎಂದರು.
ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಕುವೆಂಪು ವಿವಿಯ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ಪ್ರಾಚಾರ್ಯೆ ಪ್ರೊ.ಪಿ.ಆರ್. ಮಮತಾ, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ಕೆ.ಎಂ.ನಾಗರಾಜು, ಪ್ರೊ. ಎಸ್.ಜಗದೀಶ್, ಪ್ರೊ. ಎನ್.ಮಂಜುನಾಥ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net