

ಬ್ರಿಸ್ಬೇನ್: ಕರೊನಾ ಲಸಿಕೆಯಿಂದ ವಿನಾಯಿತಿ ಪಡೆದ ಜೋಶ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ಆಡಲು ತೆರಳಿದ ವಿಶ್ವ ನಂ. 1 ಆಟಗಾರ ಹಾಗೂ ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್‌ಗೆ ಆಸ್ಟ್ರೇಲಿಯಾ ದೇಶಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಅವರಿಗೆ ನೀಡಲಾಗಿದ್ದ ವೀಸಾವನ್ನೂ ರದ್ದುಗೊಳಿಸಲಾಗಿದ್ದು, ಈ ವರ್ಷ ಅವರು 10ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಕನಸು ಕೂಡ ಬಹುತೇಕ ಭಗ್ನಗೊಂಡಿದೆ.
ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸುವ ಎಲ್ಲ ಆಟಗಾರರಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದ್ದರೂ, ವೈದ್ಯಕೀಯ ಕಾರಣಗಳಿಂದಾಗಿ ತನಗೆ ವಿನಾಯಿತಿ ನೀಡಲಾಗಿದೆ ಎಂದು 20 ಗ್ರಾಂಡ್ ಸ್ಲಾಂಗಳ ಒಡೆಯ ಜೋಕೋ ಸೆರ್ಬಿಯಾದಿಂದ ಆಸೀಸ್‌ಗೆ ಪ್ರಯಾಣಿಸುವ ಮುನ್ನ ಪ್ರಕಟಿಸಿದ್ದರು. ಆದರೆ ವಿಕ್ಟೋರಿಯಾ ರಾಜ್ಯ ಸರ್ಕಾರ ನೀಡಿದ ಲಸಿಕೆ ವಿನಾಯಿತಿಯನ್ನು ನಿಯಮಬದ್ಧವಾಗಿಲ್ಲ ಎಂದು ಆಸ್ಟ್ರೇಲಿಯನ್ ಬಾರ್ಡರ್ ಫೋರ್ಸ್ ತಳ್ಳಿಹಾಕಿದ್ದು, ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಅವರನ್ನು ಬುಧವಾರ ದಸ್ತಗಿರಿ ಮಾಡಲಾಗಿತ್ತು. ವಿಮಾನ ನಿಲ್ದಾಣದಲ್ಲೇ 8 ಗಂಟೆಗಳನ್ನು ಕಳೆದ ಬಳಿಕ ಅವರನ್ನು ಸ್ಥಳೀಯ ಹೋಟೆಲ್‌ನಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಬಂಧನದಲ್ಲಿಟ್ಟಿದ್ದಾರೆ. ಈ ನಡುವೆ ಸೆರ್ಬಿಯಾ ಸರ್ಕಾರ, ಆಸ್ಟ್ರೇಲಿಯಾದಲ್ಲಿ ಜೋಕೋಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದೆ.
ವೀಸಾ ರದ್ದುಗೊಳಿಸಿರುವ ಸಂಬಂಧ ಜೋಕೋ ಮೇಲ್ಮನವಿ ಸಲ್ಲಿಸಿದ್ದು, ಇದರ ತೀರ್ಪು ಬರಲು ಸೋಮವಾರದವರೆಗೆ ಕಾಯಬೇಕಾಗಬಹುದು. ವೀಸಾ ರದ್ದತಿ ಪರ ತೀರ್ಪು ಬಂದರೆ ಅವರು ತವರಿಗೆ ಮರಳಬೇಕಾಗುತ್ತದೆ. ಇದರಿಂದಾಗಿ ಅವರು ಜನವರಿ 17ರಿಂದ ನಡೆಯಲಿರುವ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್‌ನಿಂದ ಹೊರಗುಳಿಯಬೇಕಾಗುತ್ತದೆ.
34 ವರ್ಷದ ಜೋಕೋ ಈ ಮುನ್ನ ಕಳೆದ ವರ್ಷದ ಜೂನ್‌ನಲ್ಲಿ ಕರೊನಾ ಪಾಸಿಟಿವ್ ಆಗಿದ್ದರು. ಈ ಹಿಂದೆ ಕರೊನಾ ಲಸಿಕೆಯ ವಿರುದ್ಧ ಮಾತನಾಡಿದ್ದ ಜೋಕೋ, ಲಸಿಕೆ ತೆಗೆದುಕೊಂಡಿರುವರೇ ಅಥವಾ ಇಲ್ಲವೇ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.