More

    ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಭಾರತ ತಂಡ ಪ್ರಕಟ, ಏಕೈಕ ಕನ್ನಡತಿಗೆ ಸ್ಥಾನ

    ನವದೆಹಲಿ: ಮಾರ್ಚ್ 4ರಿಂದ ಏಪ್ರಿಲ್ 3ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಅನುಭವಿ ಬ್ಯಾಟುಗಾರ್ತಿ ಮಿಥಾಲಿ ರಾಜ್ ಸಾರಥ್ಯದಲ್ಲಿ 15 ಆಟಗಾರ್ತಿಯರ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ಯುವ ಬ್ಯಾಟರ್ ಜೆಮೀಮಾ ರೋಡ್ರಿಗಸ್ ಮತ್ತು ಅನುಭವಿ ವೇಗಿ ಶಿಖಾ ಪಾಂಡೆ ಅವರನ್ನು ತಂಡದಿಂದ ಹೊರಗಿಡಲಾಗಿದೆ. ವಿಜಯಪುರದ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡತಿಯಾಗಿದ್ದಾರೆ.

    ಮುಂಬೈನ 21 ವರ್ಷದ ಆಟಗಾರ್ತಿ ಜೆಮೀಮಾ ಫಾರ್ಮ್ ಕೊರತೆಯಿಂದಾಗಿ ಕಡೆಗಣಿಸಲ್ಪಟ್ಟಿದ್ದಾರೆ. ಕಳೆದ ವರ್ಷ ಆಡಿದ ಎಲ್ಲ 5 ಏಕದಿನ ಪಂದ್ಯಗಳಲ್ಲಿ ಅವರು ಎರಡಂಕಿ ಮೊತ್ತ ತಲುಪಲು ವಿಫಲರಾಗಿದ್ದರು. 32 ವರ್ಷದ ಶಿಖಾ ಕೂಡ ಇತ್ತೀಚೆಗೆ ಪರಿಣಾಮಕಾರಿ ಬೌಲಿಂಗ್ ನಡೆಸಿಲ್ಲ.

    ಕಳೆದ ಆಸೀಸ್ ಪ್ರವಾಶದಲ್ಲಿ ಮಿಂಚಿದ್ದ 21 ವರ್ಷದ ಎಡಗೈ ಬ್ಯಾಟುಗಾರ್ತಿ ಯಸ್ತಿಕಾ ಭಾಟಿಯಾಗೆ ಜೆಮೀಮಾ ಬದಲಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಶಿಖಾ ಸ್ಥಾನದಲ್ಲಿ ಮತ್ತೋರ್ವ ವೇಗಿ ಮೇಘನಾ ಸಿಂಗ್‌ಗೆ ಸ್ಥಾನ ನೀಡಲಾಗಿದೆ. ಆರಂಭಿಕ ಬ್ಯಾಟರ್ ಪೂನಂ ರಾವತ್ ತಂಡದಿಂದ ಕಡೆಗಣಿಸಲ್ಪಟ್ಟ ಮತ್ತೋರ್ವ ಅನುಭವಿ ಆಟಗಾರ್ತಿಯಾಗಿದ್ದಾರೆ. ಮೂವರನ್ನು ಮೀಸಲು ಆಟಗಾರ್ತಿಯರನ್ನಾಗಿ ಹೆಸರಿಸಲಾಗಿದೆ.

    ವಿಶ್ವಕಪ್‌ಗೆ ಮುನ್ನ ಭಾರತ ತಂಡ ಫೆಬ್ರವರಿ 9ರಿಂದ 24ರವರೆಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಇದೇ ತಂಡ 5 ಪಂದ್ಯಗಳ ಏಕದಿನ ಸರಣಿಯಲ್ಲೂ ಆಡಲಿದೆ. ಪ್ರವಾಸದ ಏಕೈಕ ಟಿ20 ಪಂದ್ಯಕ್ಕೂ ಭಾರತ ತಂಡವನ್ನು ಪ್ರಕಟಿಸಲಾಗಿದೆ. 30 ವರ್ಷದ ರಾಜೇಶ್ವರಿ ಗಾಯಕ್ವಾಡ್‌ಗೆ ಇದು 2ನೇ ಏಕದಿನ ವಿಶ್ವಕಪ್ ಟೂರ್ನಿಯಾಗಿರಲಿದೆ. ಈ ಮುನ್ನ 2017ರ ವಿಶ್ವಕಪ್‌ನಲ್ಲಿ ರನ್ನರ್‌ಅಪ್ ಆದ ತಂಡದಲ್ಲೂ ಅವರು ಇದ್ದರು.

    ಮಿಥಾಲಿ, ಜೂಲನ್‌ಗೆ ವಿದಾಯ ಟೂರ್ನಿ?
    ಮುಂಬರುವ ಏಕದಿನ ವಿಶ್ವಕಪ್ ಟೂರ್ನಿ ಭಾರತೀಯ ಮಹಿಳಾ ಕ್ರಿಕೆಟ್ ಕಂಡ ಇಬ್ಬರು ಶ್ರೇಷ್ಠ ಆಟಗಾರ್ತಿಯರಾದ ಅನುಭವಿ ಬ್ಯಾಟರ್ ಮಿಥಾಲಿ ರಾಜ್ ಹಾಗೂ ಅನುಭವಿ ವೇಗಿ ಜೂಲನ್ ಗೋಸ್ವಾಮಿಗೆ ಬಹುತೇಕ ವಿದಾಯ ಟೂರ್ನಿ ಆಗಿರಲಿದೆ. ಇಬ್ಬರೂ 39 ವರ್ಷದವರಾಗಿದ್ದು, ಭಾರತ ಪರ ಗರಿಷ್ಠ ರನ್ ಮತ್ತು ವಿಕೆಟ್ ಗಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

    ಪಾಕ್ ಮೊದಲ ಎದುರಾಳಿ
    ವಿಶ್ವಕಪ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಾರ್ಚ್ 6ರಂದು ಬೇ ಓವಲ್‌ನಲ್ಲಿ ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಬಳಿಕ ಆತಿಥೇಯ ನ್ಯೂಜಿಲೆಂಡ್ (ಮಾ. 10), ವೆಸ್ಟ್ ಇಂಡೀಸ್ (ಮಾ. 12), ಹಾಲಿ ಚಾಂಪಿಯನ್ ಇಂಗ್ಲೆಂಡ್ (ಮಾ. 16), ಆಸ್ಟ್ರೇಲಿಯಾ (ಮಾ. 19), ಬಾಂಗ್ಲಾದೇಶ (ಮಾ. 22) ಮತ್ತು ದಕ್ಷಿಣ ಆಫ್ರಿಕಾ (ಮಾ. 27) ತಂಡಗಳನ್ನು ಎದುರಿಸಲಿದೆ. 8 ತಂಡಗಳ ಟೂರ್ನಿಯಲ್ಲಿ ರೌಂಡ್ ರಾಬಿನ್ ಲೀಗ್ ಮಾದರಿಯ ಬಳಿಕ ಅಗ್ರ 4 ತಂಡಗಳು ಸೆಮಿಫೈನಲ್‌ಗೇರಲಿವೆ.

    ವಿಶ್ವಕಪ್ ಮತ್ತು ಕಿವೀಸ್ ವಿರುದ್ಧ ಏಕದಿನ ಸರಣಿಗೆ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮಾನ್‌ಪ್ರೀತ್ ಕೌರ್ (ಉಪನಾಯಕಿ), ಸ್ಮತಿ ಮಂದನಾ, ಶೆಫಾಲಿ ವರ್ಮ, ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮ, ರಿಚಾ ಘೋಷ್ (ವಿ.ಕೀ), ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ (ವಿ.ಕೀ), ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್.
    ಮೀಸಲು ಆಟಗಾರ್ತಿಯರು: ಎಸ್. ಮೇಘನಾ, ಏಕ್ತಾ ಬಿಷ್ಟ್, ಸಿಮ್ರಾನ್ ದಿಲ್ ಬಹದೂರ್.

    ಕಿವೀಸ್ ವಿರುದ್ಧ ಏಕೈಕ ಟಿ20 ಪಂದ್ಯಕ್ಕೆ ತಂಡ: ಹರ್ಮಾನಪ್ರೀತ್ ಕೌರ್ (ನಾಯಕಿ), ಸ್ಮತಿ ಮಂದನಾ (ಉಪನಾಯಕಿ), ಶೆಫಾಲಿ ವರ್ಮ, ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮ, ರಿಚಾ ಘೋಷ್, ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ಏಕ್ತಾ ಬಿಷ್ಟ್, ಎಸ್. ಮೇಘನಾ, ಸಿಮ್ರಾನ್ ದಿಲ್ ಬಹದೂರ್.

    VIDEO: ರಬಾಡಗೆ ಭರ್ಜರಿ ಸಿಕ್ಸರ್ ಸಿಡಿಸಿದ ಬುಮ್ರಾ, ಪತ್ನಿ ಸಂಜನಾ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts