ಗುಡ್ಡ ಸಮತಟ್ಟು ಕಾಮಗಾರಿ ಸ್ಥಗಿತಕ್ಕೆ ಸೂಚನೆ

Ull_Gudda
Published on

ಉಳ್ಳಾಲ: ಕೊಣಾಜೆ ಗ್ರಾಮದ ಪಟ್ಟೋರಿ ಅರಸರಮೂಲೆ ಎಂಬಲ್ಲಿ ಕಳೆದೆರಡು ವಾರಗಳಿಂದ ಖಾಸಗಿಯವರಿಗೆ ಸಂಬಂಧಪಟ್ಟ ಗುಡ್ಡ ಸಮತಟ್ಟು ವಾಡುವ ಕೆಲಸದಿಂದಾಗಿ ಕೆಳಭಾಗದಲ್ಲಿರುವ ಮನೆಗಳಿಗೆ ಅಪಾಯ ಎದುರಾಗಿತ್ತು. ಈ ಹಿನ್ನೆಲೆ ಬುಧವಾರ ತಹಸೀಲ್ದಾರ್ ಪುಟ್ಟರಾಜು ಸ್ಥಳಕ್ಕೆ ಭೇಟಿ ನೀಡಿ ಕೆಲಸ ನಿಲ್ಲಿಸುವಂತೆ ಸೂಚಿಸಿದ್ದಾರೆ.

ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ವಾರ್ಡ್ ಆಗಿರುವ ಪಟ್ಟೋರಿ ಅರಸರಮೂಲೆ ಗುಡ್ಡ ಪ್ರದೇಶವನ್ನು ಕಳೆದ 20 ದಿನಗಳಿಂದ ಜೆಸಿಬಿ ಮೂಲಕ ಸಮತಟ್ಟು ವಾಡುವ ಕೆಲಸ ನಡೆಸುತ್ತಿತ್ತು. ಇದರ ಪರಿಣಾಮ ಹತ್ತು ದಿನಗಳ ಹಿಂದೆ ಬಂದ ಮಳೆಗೆ ಮೇಲ್ಭಾಗದ ಮಣ್ಣು ನೀರಿನೊಂದಿಗೆ ಹರಿದು ಕೆಳಭಾಗದಲ್ಲಿರುವ ಮನೆಗಳು, ಜಮೀನಿಗೆ ಬಿದ್ದಿದೆ. ಸುಧಾಕರ್ ಬಿ. ಎಂಬುವರ ಮನೆಯ ಹಿಂಬದಿ ಗೋಡೆ, ಅಂಗಳಕ್ಕೆ ಭಾರೀ ಪ್ರವಾಣದ ಮಣ್ಣು ಮತ್ತು ನೀರು ಬಂದು ಆವರಣಗೋಡೆ ಕುಸಿದು ಬಿದ್ದಿತ್ತು.

ನಂತರವೂ ಗುಡ್ಡ ಸಮತಟ್ಟು ಕೆಲಸ ಮುಂದುವರಿಸಿದ್ದರಿಂದ ಕೆಳಭಾಗದಲ್ಲಿರುವ ಮನೆಗಳಿಗೆ ಭಾರೀ ಅಪಾಯದ ಆತಂಕ ಎದುರಾಗಿತ್ತು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಕೊಣಾಜೆ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ಗ್ರಾಮಕರಣಿಕೆ ನಯನಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಅನಾಹುತವಾದಲ್ಲಿ ಕೇಸು

ಕಾಮಗಾರಿ ನಡೆಸುವ ಸಂದರ್ಭ ಗ್ರಾಮ ಪಂಚಾಯಿತಿಯಿಂದ ಎನ್‌ಒಸಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಅಲ್ಲದೆ ಕೆಲಭಾಗದ ಮನೆಗಳಿಗೆ ಅಪಾಯ ಇರುವುದರಿಂದ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿ, ತಹಸೀಲ್ದಾರ್‌ಗೆ ವರದಿ ನೀಡಿದ್ದರು. ಆದರೂ ಸಮತಟ್ಟು ಕೆಲಸ ಮುಂದುವರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ತಹಸೀಲ್ದಾರ್ ಭೇಟಿ ನೀಡಿ ಕೆಲಸ ನಿಲ್ಲಿಸಿದ್ದಾರಲ್ಲದೆ ಕೆಳಭಾಗದಲ್ಲಿರುವ ಮನೆಗಳಿಗೆ ಭದ್ರತೆಯ ಭರವಸೆ ನೀಡುವಂತೆ ಸೂಚಿಸಿದ್ದಾರೆ. ಈಗಾಗಲೇ ಕೆಲವು ಕಡೆಗಳಲ್ಲಿ ಗುಡ್ಡ ಸಮತಟ್ಟುಗೊಳಿಸಿದ್ದರಿಂದ ಅಪಾಯ ಎದುರಾಗಿದೆ. ಇಲ್ಲೂ ಅಂಥದ್ದೇ ಪರಿಸ್ಥಿತಿ ಇದೆ. ಇಲ್ಲೇನಾದರೂ ಅನಾಹುತವಾದಲ್ಲಿ ಕೇಸು ದಾಖಲಿಸುವುದಾಗಿ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net