ಅನಧಿಕೃತ ಫ್ಲೆಕ್ಸ್ ಗೆ ಬೇಕಿದೆ ಕಡಿವಾಣ : ತೆರವಿಗೆ ಅಧಿಕಾರಿಗಳಿಗೆ ಅಧ್ಯಕ್ಷರ ಸೂಚನೆ

New Project (37)
Published on

ಮೂಲ್ಕಿ: ಪಡುಬೈಲು ಪ್ರದೇಶದಲ್ಲಿ ಕಳ್ಳರ ಹಾವಳಿ, ನದಿ ತೀರದ ಪ್ರದೇಶದಲ್ಲಿ ಅನೈತಿಕ ಚಟುವಟಿಕೆ, ಅನಧಿಕೃತ ಫ್ಲೆಕ್ಸ್ ಗೆ ಕಡಿವಾಣ, ದೂರು ಸ್ವೀಕರಿಸದ ಮೆಸ್ಕಾಂ, ಉಪ್ಪು ನೀರು ಸೋರಿಕೆಯಿಂದ ಕೃಷಿ ಹಾನಿ, ನ.ಪಂ. ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ, ಕೊಕ್ಕರಕಲ್ ಬಳಿ ಫ್ಲಾೃಟ್‌ನ ತ್ಯಾಜ್ಯ ನೀರು ಹೆದ್ದಾರಿ ಬದಿ ಹರಿಯುತ್ತಿರುವುದು ಮುಂತಾದ ವಿಷಯಗಳ ಬಗ್ಗೆ ನಗರ ಪಂಚಾಯಿತಿ ಮಾಸಿಕ ಸಭೆಯಲ್ಲಿ ಚರ್ಚೆ ನಡೆಯಿತು.

ಮೂಲ್ಕಿ ನಗರ ಪಂಚಾಯಿತಿ ಮಾಸಿಕ ಸಭೆ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಗೆ ಕಡಿವಾಣ ಹಾಕುವ ಬಗ್ಗೆ ಚರ್ಚೆ ನಡೆದು ಸೋಮವಾರದ ಒಳಗೆ ಅನಧಿಕೃತ ಫ್ಲೆಕ್ಸ್ ಗಳನ್ನು ತೆರವುಗೊಳಿಸಲು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರೆ ಸ್ವೀಕರಿಸದ ಇಲಾಖೆ: ಮೆಸ್ಕಾಂ ಇಲಾಖೆ ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂದು ಸದಸ್ಯ ಪುತ್ತು ಬಾವ ಆರೋಪಿಸಿದರು. ಇದಕ್ಕೆ ಧನಿಗೂಡಿಸಿದ ಸದಸ್ಯ ಮಂಜುನಾಥ ಕಂಬಾರ, ಲಿಂಗಪ್ಪಯ್ಯಕಾಡಿನಲ್ಲಿ ಕೆಲವು ಕಡೆಗಳಲ್ಲಿ ಗ್ರಾಹಕರಿಗೆ ವಿದ್ಯುತ್ ಮೀಟರ್ ರೀಡಿಂಗ್ ನಿಧಾನಗತಿಯಲ್ಲಿದೆ ಎಂದು 2,000 ಅಥವಾ 3000 ರೂ. ದಂಡ ಕಟ್ಟಲು ಹೇಳಿದ್ದಾರೆ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕು ಎಂದರು.

ನ.ಪಂ. ವ್ಯಾಪ್ತಿಯ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಗೆ ಎಳತ್ತೂರು ಬಳಿ 1.89 ಎಕರೆ ಸ್ಥಳಗೊತ್ತು ಮಾಡಿದ್ದು ಸ್ಥಳಿಯರ ವಿರೋಧದ ಬಗ್ಗೆ ಜನರಿಗೆ ಮನವರಿಕೆ ಮಾಡುವುದರ ಜತೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪೊಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ನಡೆಸಲು ನಿರ್ಧರಿಸಲಾಯಿತು.

ಕ್ರಮಕ್ಕೆ ಸೂಚನೆ: ಕೊಕ್ಕರಕಲ್ ಬಳಿ ಫ್ಲಾೃಟ್‌ನ ತ್ಯಾಜ್ಯ ನೀರನ್ನು ಹೆದ್ದಾರಿ ಬದಿಯ ತೋಡಿಗೆ ಹರಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಯೋಗೀಶ್ ಕೋಟ್ಯಾನ್ ಆಗ್ರಹಿಸಿದರು. ಕಾರ್ನಾಡು ಮಾರ್ಕೆಟ್ ಪ್ರದೇಶದಲ್ಲಿಯೂ ತ್ಯಾಜ್ಯ ನೀರು ರಸ್ತೆ ಬದಿಯಲ್ಲಿ ಹರಿಯುತ್ತಿದೆ. ಈ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಅಧ್ಯಕ್ಷರು ಮುಖ್ಯಾಧಿಕಾರಿ ಮಧುಕರ್ ಅವರಿಗೆ ಸೂಚಿಸಿದರು.

ಪೈಪ್ ತೆರವಿಗೆ ಒತ್ತಾಯ: ನ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಹೆಚ್ಚಳದ ಬಗ್ಗೆ ಪಕ್ಷಭೇದ ಮರೆತು ಎಲ್ಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಕೆ.ಎಸ್.ರಾವ್ ನಗರದಲ್ಲಿ ಅಕ್ರಮ ಕುಡಿಯುವ ನೀರಿನ ಸಂಪರ್ಕ ಹಾಗೂ ಬಿಲ್ ಬಾಕಿ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಲಿಂಗಪ್ಪಯ್ಯಕಾಡು ಕೊಳಚೆ ನೀರು ಹಾದು ಹೋಗುವ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್ ಇದ್ದು ತೆರವುಗೊಳಿಸಬೇಕು ಎಂದು ಸದಸ್ಯರಾದ ಭೀಮಾಶಂಕರ್ ಮತ್ತು ಮಂಜುನಾಥ ಕಂಬಾರ ಒತ್ತಾಯಿಸಿದರು.

ಸದಸ್ಯೆ ಶಾಂತಾ ಕಿರೋಡಿಯನ್ ಅವರ ನಿಧನದಿಂದ ತೆರವಾದ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ರಾಧಿಕಾ ಕೋಟ್ಯಾನ್ ಅವರನ್ನು ಆಯ್ಕೆ ವಾಡಲಾಯಿತು.

ಸಭೆಯಲ್ಲಿ ಭೀಮಾಶಂಕರ್, ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ವಿಮಲಾ ಪೂಜಾರಿ, ಹರ್ಷರಾಜ ಶೆಟ್ಟಿ, ನ.ಪಂ. ಸದಸ್ಯರಾದ ಶೈಲೇಶ್ ಕುವಾರ್, ಸುಭಾಷ್ ಶೆಟ್ಟಿ, ದಯಾವತಿ ಅಂಚನ್, ಬಾಲಚಂದ್ರ ಕಾಮತ್, ಲೋಕೇಶ್ ಕೋಟ್ಯಾನ್, ತಿಲಕ್ ಪೂಜಾರಿ, ರಾಧಿಕಾ ಕೋಟ್ಯಾನ್ ಭಾಗವಹಿಸಿದ್ದರು.

ಸಭೆಯಲ್ಲಿ ಚರ್ಚೆಯಾದ ವಿಷಯ

ಕೆ.ಎಸ್.ರಾವ್ ನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಬೇಕು, ಮೂಲ್ಕಿ ಸರ್ಕಾರಿ ಆಸ್ಪತ್ರೆ ಬಳಿ ಬಸ್ ತಂಗುದಾಣ ನಿರ್ಮಾಣ, ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಆಂಬುಲೆನ್ಸ್ ಲಭ್ಯತೆ, ಲಿಂಗಪ್ಪಯ್ಯಕಾಡು ಸಾರ್ವಜನಿಕ ಶೌಚಗೃಹ ಹಾಗೂ ಉದ್ಯಾನವನ ಅಭಿವೃದ್ಧಿ, ಆಸ್ತಿ ತೆರಿಗೆ ಹೆಚ್ಚಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಉಪ್ಪುನೀರು ಸಮಸ್ಯೆ ಪರಿಹಾರಕ್ಕೆ ಒತ್ತಾಯ

ನಗರ ಪಂಚಾಯಿತಿ ವ್ಯಾಪ್ತಿಯ ಚಿತ್ರಾಪು ಪಡುಬೈಲು ಪ್ರದೇಶದಲ್ಲಿ ಪಡುಪಣಂಬೂರು ಗ್ರಾ.ಪಂ ನ ಅಣೆಕಟ್ಟಿನಿಂದ ಉಪ್ಪುನೀರು ಸೋರಿಕೆಯಾಗಿ ಕೃಷಿ ಹಾನಿಯಾಗಿದೆ ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ ಎಂದು ಸದಸ್ಯ ಯೋಗೀಶ್ ಕೋಟ್ಯಾನ್ ಹೇಳಿದರು. ಇದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಸದಸ್ಯೆ ರಾಧಿಕಾ ಕೋಟ್ಯಾನ್ ಸಹಮತ ವ್ಯಕ್ತಪಡಿಸಿ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net