ವಿಜಯವಾಣಿ ಸುದ್ದಿಜಾಲ ಮಧೂರು
ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ಬಳಿಕ ನಡೆಯುವ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯ ತಂತ್ರಿ ಸ್ಥಾನ ಹಂಚಿಕೆ ನಿರ್ಣಯವನ್ನು ಪ್ರಶ್ನಿಸಿ ಮಲಬಾರ್ ದೇವಸ್ವಂ ಆಯುಕ್ತರ ವಿರುದ್ಧ ಮಧೂರು ಬ್ರಹ್ಮಕಲಶೋತ್ಸವ ಸಮಿತಿ ನೀಡಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಹೆಸರಲ್ಲಿದ್ದ ಅರ್ಜಿಯನ್ನು ಯಾವ ಕಾರಣಕ್ಕೂ ಇದು ಸಿಂಧುತ್ವದ ಕೇಸಲ್ಲ ಎಂದು ಹೈಕೋರ್ಟ್ ಮಾ.21ರಂದು ನೀಡಿದ ತೀರ್ಪಲ್ಲಿ ಉಲ್ಲೇಖಿಸಿದೆ.
ಮಧೂರು ದೇವಳ ತಂತ್ರಿಗಳ ಸ್ಥಾನದ ವಿವಾದಕ್ಕೆ ಸಂಬಂಧಿಸಿ ಈಗಾಗಲೇ ಹೈಕೋರ್ಟು ನೀಡಿದ ತೀರ್ಪಿನನ್ವಯ ಬ್ರಹ್ಮಕಲಶ ಸಮಿತಿಯ ಪ್ರಧಾನ ಪದಾಧಿಕಾರಿಗಳ ಉಪಸ್ಥಿತಿಯಲ್ಲೇ ಆಯುಕ್ತರು ನಿರ್ಣಯ ತಳೆದಿದ್ದರು. ತೀರ್ಪು ಪ್ರಕಟವಾಗುವ ಮುನ್ನ ಬ್ರಹ್ಮಕಲಶೋತ್ಸವ ಸಮಿತಿ ಹೆಸರಲ್ಲಿ ತೀರ್ಪು ಉಲ್ಲಂಘನೆಯೆಂದು ಹೈಕೋರ್ಟಿನಲ್ಲಿ ಕೇಸ್ ದಾಖಲಿಸಿರುವುದು ಉಚಿತವಲ್ಲ ಎಂದು ಹೇಳಿದ ಹೈಕೋರ್ಟ್, ಇದು ಮುಗಿದ ಪ್ರಕರಣ ಎಂಬ ಉಲ್ಲೇಖದೊಂದಿಗೆ ಮುಕ್ತಾಯಗೊಳಿಸಿದೆ.
ತಂತ್ರಿ ಸ್ಥಾನದ ಹಕ್ಕು ವಿವಾದ ಹಿನ್ನೆಲೆಯಲ್ಲಿ ಪ್ರಕರಣ ಹೈಕೋರ್ಟ್ ಮೆಟ್ಟಲೇರಿತ್ತು. ಬ್ರಹ್ಮಕಲಶ, ಮೂಡಪ್ಪ ಸೇವೆಯನ್ನು ಉಳಿಯ ವಿಷ್ಣು ಆಸ್ರ ತಂತ್ರಿ ಮತ್ತು ದೇರೆಬೈಲು ಡಾ.ಶಿವಪ್ರಸಾದ ತಂತ್ರಿಗಳ ಜಂಟಿ ನೇತೃತ್ವದಲ್ಲಿ ಆಗಮ ವಿಚಾರೋಕ್ತವಾಗಿ ನಡೆಸಲು ತೀರ್ಪು ನೀಡಿತ್ತು. ಆದರೆ ಈ ಕುರಿತು ದೇವಸ್ವಂ ಮಂಡಳಿ ಸಂಬಂಧಪಟ್ಟವರನ್ನು ಕರೆಸಿ ಸಮಾಗಮ ನಡೆಸಿ ಒಮ್ಮತದ ನಿರ್ಣಯ ಕೈಗೊಳ್ಳಬೇಕೆಂದು ಆದೇಶಿಸಿತ್ತು. ಇದರಂತೆ ದೇರೆಬೈಲು ತಂತ್ರಿಗಳಿಗೆ ಆರಂಭದ ಬ್ರಹ್ಮಕಲಶ ಹಕ್ಕನ್ನೂ, ನಂತರದ ಮೂಡಪ್ಪ ಸೇವೆಯ ಹಕ್ಕನ್ನು ಉಳಿಯತ್ತಾಯ ವಿಷ್ಣು ಆಸ್ರರಿಗೂ ಹಂಚಿ, ಉಭಯ ತಂತ್ರಿಗಳ ಒಪ್ಪಿಗೆ ಮೇರೆಗೆ ವಿವಾದಿತ ಪ್ರಕರಣಕ್ಕೆ ಇತ್ಯರ್ಥಗೊಳಿಸಲಾಗಿತ್ತು.