ಈ ಬಾರಿ ಕೊಹ್ಲಿಯಿಂದ ಇದು ಸಾಧ್ಯವಾಗಲ್ಲ! ಮತ್ತೆ ವಿರಾಟ್​ ವಿರುದ್ಧ ಮುಗಿಬಿದ್ದ ಅಂಬಟಿ ರಾಯುಡು

Kohli Ambatti
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಅಂಬಟಿ ರಾಯುಡು ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್​ 17ನೇ ಸೀಸನ್​ನ ಮುಕ್ತಾಯವಾದರೂ ಟೀಮ್​ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡವನ್ನು ರಾಯುಡು ಟೀಕಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಮತ್ತೊಮ್ಮೆ ವಿರಾಟ್​ ಮೇಲೆ ತಮ್ಮ ವಕ್ರ ದೃಷ್ಟಿಯನ್ನು ಬೀರಿದ್ದಾರೆ.

ನಿನ್ನೆಯಿಂದ ಟಿ20 ವಿಶ್ವಕಪ್​ ಆರಂಭವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡ ಒಂದು. ಅನೇಕ ಮಾಜಿ ಕ್ರಿಕೆಟಿಗರು ಕೂಡ ಇಂಡಿಯಾ ನಮ್ಮ ಫೇವರಿಟ್​ ಎಂದು ಹೇಳಿದ್ದಾರೆ. ಈ ಟೂರ್ನಿಯಲ್ಲಿ ಅಗ್ರ ತಂಡಗಳಿಗೆ ಬ್ಯಾಟಿಂಗ್ ಘಟಕಗಳು ನಿರ್ಣಾಯಕ ಪಾತ್ರ ವಹಿಸಲಿವೆ. ವಿರಾಟ್ ಕೊಹ್ಲಿ 2022ರಲ್ಲಿ 296 ರನ್ ಗಳಿಸುವ ಮೂಲಕ ಅಗ್ರ ರನ್ ಗಳಿಸಿದ ಆಟಗಾರರಾಗಿದ್ದರು.

ಪ್ರಸ್ತುತ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಸೇರಿದಂತೆ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಮತ್ತು ಇಂಗ್ಲೆಂಡ್​ನ ಜಾಸ್ ಬಟ್ಲರ್ ಕೂಡ ಅತ್ಯಧಿಕ ರನ್​ ಗಳಿಸುವ ಪಟ್ಟಿಗೆ ಸೇರಿಕೊಳ್ಳುವ ನಿರೀಕ್ಷೆ ಇದೆ. ಅದರಲ್ಲೂ ಐಪಿಎಲ್​ನಲ್ಲಿ ಉತ್ತಮ ಫಾರ್ಮ್​ ಮೂಲಕ ಆರೆಂಜ್​ ಕ್ಯಾಪ್​ ತಮ್ಮದಾಗಿಸಿಕೊಂಡಿರುವ ಕೊಹ್ಲಿ ಟಿ20 ವಿಶ್ವಕಪ್​ನಲ್ಲೂ ಕಮಾಲ್​ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತದ ಮಾಜಿ ಆಟಗಾರ ಅಂಬಟಿ ರಾಯುಡು ಹೇಳಿರುವ ಮಾತು ಇದೀಗ ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದೆ.

ಸ್ಟಾರ್ ಸ್ಪೋರ್ಟ್ಸ್ ಜತೆಗಿನ ಸಂಭಾಷಣೆಯಲ್ಲಿ ರಾಯುಡು ಟೀಮ್ ಇಂಡಿಯಾದ ನಾಯಕ ರೋಹಿತ್​ ಶರ್ಮ ಹೆಸರನ್ನು ತೆಗೆದುಕೊಂಡರು. ಈ ಬಾರಿ ಕೊಹ್ಲಿಯಲ್ಲ ರೋಹಿತ್​ ಅವರು ಮೆಗಾ ಟೂರ್ನಮೆಂಟ್​ನಲ್ಲಿ ಅತ್ಯಧಿಕ ರನ್​ ಗಳಿಸಲಿದ್ದಾರೆ ಎಂದು ಹೇಳಿದರು. ಆದರೆ, ರಾಯುಡು ಹೇಳಿಕೆ ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಸದಾ ಕೊಹ್ಲಿ ವಿರುದ್ಧ ಮಾತನಾಡುವ ರಾಯುಡು ಸಾಧನೆ ಏನಿದೆ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಕೊಹ್ಲಿ ಈಗಾಗಲೇ ಲೆಜೆಂಡ್​ ಸ್ಥಾನವನ್ನು ತಲುಪಿದ್ದಾರೆ. ಅಂಬಟಿ ರಾಯುಡು ಎಷ್ಟೇ ಬಾಯಿ ಬಡಿದುಕೊಂಡರು ಕೊಹ್ಲಿ ಹತ್ತಿರವು ಸುಳಿಯುವುದಕ್ಕೆ ಆಗುವುದಿಲ್ಲ. ನಿಮ್ಮ ಮಾತಿಗೆ ಕೊಹ್ಲಿ ಯಾವ ರೀತಿ ಉತ್ತರ ಕೊಡಬೇಕು ಆ ರೀತಿ ಕೊಡುತ್ತಾರೆ ಎನ್ನುವ ಮೂಲಕ ಕೊಹ್ಲಿ ಅಭಿಮಾನಿಗಳು ರಾಯುಡು ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net