

ನವದೆಹಲಿ: ನಮ್ಮಲ್ಲಿ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಸಸ್ಯಾಹಾರಿಗಳಾಗಿ ಜೀವನ ನಡೆಸುತ್ತಿರುವ ಸಾವಿರಾರು ಜನರಿದ್ದಾರೆ. ಈ ಪ್ರಕರಣದಲ್ಲಿ ಓರ್ವ ಮಹಿಳೆಗೆ ಆನ್ಲೈನ್ ಆ್ಯಪ್ ಮೂಲಕ ಸಸ್ಯಾಹಾರಿ ಆಹಾರಕ್ಕೆ ಆರ್ಡರ್ ನೀಡಿ ಮಾಂಸಾಹಾರ ಸಿಕ್ಕದೆ. ಬಂದ ಡೆಲಿವರಿಯನ್ನು ಸಸ್ಯಾಹಾರಿ ಎಂದೇ ನಂಬಿ ಮೆಲ್ಲುತ್ತಿರುವಾಗ ಮೂಳೆಯ ತುಂಡು ಸಿಕ್ಕರೆ ಹೇಗಾಗಬಹುದು?
ಹೌದು! ಅಂತಹದೇ ಘಟನೆ ಈ ಪ್ರಕರಣದಲ್ಲಿ ನಡೆದಿದೆ. ನತಾಷಾ ಭಾರದ್ವಾಜ್ ಎಂಬ ಮಹಿಳೆ ಸ್ವಿಗ್ಗಿಯಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಬಂದಿದ್ದು ಮಾತ್ರ ನಾನ್ವೆಜ್ ಬಿರಿಯಾನಿ. ಅದನ್ನು ತಿಳಿಯದೇ ತಿನ್ನುತ್ತಿರುವಾಗ ಅವರಿಗೆ ಮೂಳೆಯ ತುಂಡೊಂದು ಸಿಕ್ಕಿದೆ. ಇದರಿಂದ ಆಘಾತಕ್ಕೊಳಗಾದ ಅವರು ತಕ್ಷಣ ಸ್ವಿಗ್ಗಿಗೆ ದೂರನ್ನು ನೀಡಿದ್ದಾರೆ. ಹಣವನ್ನು ಮರುಪಾವತಿ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಅಲ್ಲಿನ ಕಸ್ಟಮರ್ ಕೇರ್ ವಿಭಾಗದವರು ಮಾತ್ರ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ.
ಆಹಾರವನ್ನು ತಯಾರಿಸಿದ ಹೋಟೇಲಿನವರು ಹಣ ಮರುಪಾವತಿ ಮಾಡುವುದಕ್ಕೆ ಒಪ್ಪದ ಕಾರಣ ಅದನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಅದಲ್ಲದೇ ನಿಮಗಾದ ಅನುಭವದ ಫೀಡ್ಬ್ಯಾಕ್ ನೀಡಿದರೆ ನಾವು ಹೋಟೇಲಿಗೆ ಅದನ್ನು ಫಾರ್ವರ್ಡ್ ಮಾಡುತ್ತೇವೆ ಎಂದಿದ್ದಾರೆ. ಆದರೆ ಈ ಮಹಿಳೆ ಮಾತ್ರ "ಮಾಂಸಾಹಾರ ತಿಂದು ನನಗಾದ ಮಾನಸಿಕ ಆಘಾತ ಫೀಡ್ಬ್ಯಾಕ್ ನೀಡದರೆ ಸರಿಯಾಗುತ್ತದೆಯೇ" ಎಂದು ಸಿಟ್ಟಾಗಿ ಪ್ರಶ್ನಿಸಿದ್ದಾರೆ.
ನಂತರ ಮಹಿಳೆ ಕೋರ್ಟ್ಗೆ ಹೋಗುವುದಾಗಿ ಹೇಳಿದ ಮೇಲೂ ಹಿಂದೆ ನೀಡಿದ್ದ ರೀತಿಯಲ್ಲೇ ಅವರು ಉತ್ತರಿಸಿದ್ದಾರೆ. ಇದರಿಂದಾಗಿ ಸಿಟ್ಟಿಗೆದ್ದ ಮಹಿಳೆ ಟ್ವೀಟ್ ಮಾಡಿದ್ದಾರೆ. ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಸಿಟ್ಟಾಗಿರುವ ಮಹಿಳೆ ಬಹು ಗಂಭೀರವಾಗಿ ಟ್ವೀಟ್ ಮಾಡಿದ್ದು ಅಗತ್ಯ ದಾಖಲೆಗಳನ್ನು ಜತೆಗೆ ಲಗತ್ತಿಸಿದ್ದಾರೆ.