More

    ವಿಜಯವಾಣಿ ವಿಶೇಷ | ಬ್ಯಾಂಕ್​ಗಳಲ್ಲಿ ಅಕ್ರಮದ ಭಂಡಾರ; ಲಾಕರ್​ಗಳಲ್ಲೇ ಕಂತೆಕಂತೆ ನೋಟು! ಸಹಕಾರಿ ಬ್ಯಾಂಕ್​ಗಳ ಮೇಲೆ ಐಟಿ ದಾಳಿ ಪ್ರಕರಣ

    ಲೆಕ್ಕವಿಲ್ಲದೆ ಇಟ್ಟುಕೊಂಡಿದ್ದ ಕೋಟ್ಯಂತರ ರೂ. ಪತ್ತೆ

    ಬ್ಯಾಂಕ್​ ಅಧಿಕಾರಿ, ಸಿಬ್ಬಂದಿಗಳ ಹೆಸರಲ್ಲೇ ಲಾಕರ್​

    ಕೀ ಕೊಡದೆ ಕಳ್ಳಾಟ, ಬೀಗ ಒಡೆದು ನಗದು ಹಣ ಜಪ್ತಿ

    ಸರ್ಕಾರಿ ಅಧಿಕಾರಿಗಳ ಕಮಿಷನ್​ ಹಣದ ವಹಿವಾಟು

    ಕೀರ್ತಿನಾರಾಯಣ ಸಿ. ಬೆಂಗಳೂರು

    ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತನಿಖೆ ಮುಂದುವರಿದಷ್ಟೂ ಕೋ&ಆಪರೇಟಿವ್​ ಬ್ಯಾಂಕ್​ಗಳು ಹಾಗೂ ಸೊಸೈಟಿಗಳ ಅಕ್ರಮ ಆರ್ಥಿಕ ವಹಿವಾಟಿನ ರಹಸ್ಯಗಳು ಬೆಳಕಿಗೆ ಬರುತ್ತಿವೆ. ಬ್ಯಾಂಕ್​ ಲಾಕರ್​ಗಳಲ್ಲಿ ಸಿಬ್ಬಂದಿ ಹೆಸರಲ್ಲೇ ಕೋಟ್ಯಂತರ ರೂ. ನಗದು ಇಟ್ಟಿದ್ದ ಸಂಗತಿ ಬಯಲಾಗಿದೆ. ಅಲ್ಲದೆ, ಕೆಲ ಸರ್ಕಾರಿ ಅಧಿಕಾರಿಗಳು ಕಮೀಷನ್​ ರೂಪದಲ್ಲಿ ಪಡೆಯುತ್ತಿದ್ದ ಅನಧಿಕೃತ ನಗದನ್ನು ಸಹಕಾರಿ ಬ್ಯಾಂಕ್​ಗಳ ಮುಖಾಂತರ ಅಧಿಕೃತವಾಗಿಸಿಕೊಂಡಿರುವ ವಿಚಾರವೂ ದೃಢಪಟ್ಟಿದೆ. ಬ್ಯಾಂಕ್​ ವಹಿವಾಟಿನ ಕುರಿತು ವಿವರಣೆ ಕೊಡುವಂತೆ ದಾಳಿಗೊಳಗಾದ ಎಲ್ಲ ಸಹಕಾರಿ ಬ್ಯಾಂಕ್​ಗಳಿಗೆ ಐಟಿ ಇಲಾಖೆ ನೋಟಿಸ್​ ಜಾರಿ ಮಾಡಿದೆ.

    ಬೆಂಗಳೂರಿನ 4 ಸಹಕಾರಿ ಬ್ಯಾಂಕ್​ಗಳು ಸೇರಿ ರಾಜ್ಯಾದ್ಯಂತ ಕೋ&ಆಪರೇಟಿವ್​ ಬ್ಯಾಂಕ್​ಗಳಿಗೆ ಸಂಬಂಧಿಸಿದಂತೆ 16 ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಕೆಲ ದಾಖಲಾತಿ ಪತ್ರಗಳು ಹಾಗೂ ಡಿಜಿಟಲ್​ ಸಾಕ್ಷ್ಯಾಧಾರಗಳನ್ನು ಜಪ್ತಿ ಮಾಡಿಕೊಂಡಿದ್ದರು. ಪರಿಶೀಲನೆ ವೇಳೆ 1,000 ಕೋಟಿ ರೂ. ಆರ್ಥಿಕ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ಇದೇ ವೇಳೆ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವೊಂದು ರೋಚಕ ವಿಚಾರಗಳು ಐಟಿ ಮೂಲಗಳಿಂದ ಗೊತ್ತಾಗಿದೆ.

    ಬ್ಯಾಂಕ್​ನ ಮ್ಯಾನೇಜರ್​, ಅಸಿಸ್ಟೆಂಟ್​ ಮ್ಯಾನೇಜರ್​, ನಿರ್ದೇಶಕರು, ಕೆಳಹಂತದ ಸಿಬ್ಬಂದಿಯೇ ಲಾಕರ್​ ಸೌಲಭ್ಯ ಪಡೆದು ಅದರಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಇಟ್ಟಿದ್ದರು. ದಾಳಿ ನಡೆಸಿದಾಗ ಲಾಕರ್​ ಕೀ ಕೊಡಲು ನಿರಾಕರಿಸಿದ್ದಾರೆ. ಹೀಗಾಗಿ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬ್ಯಾಂಕ್​ವೊಂದರಲ್ಲೇ 3.3 ಕೋಟಿ ನಗದು ಹಾಗೂ 2 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿಯಾಗಿದೆ. ಲಾಕರ್​ನಲ್ಲಿ 12 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದ್ದು, ದಾಖಲಾತಿ ಒದಗಿಸಿದ ಆಭರಣ ಬಿಟ್ಟು ಉಳಿದದ್ದನ್ನು ವಶಕ್ಕೆ ಪಡೆದಿದ್ದಾರೆ.

    ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಕೆಲ ವಾರಗಳ ಮುಂಚೆ ಬ್ಯಾಂಕ್​ ಲಾಕರ್​ಗಳಲ್ಲಿದ್ದ ದೊಡ್ಡ ಪ್ರಮಾಣದ ನಗದನ್ನು ಹೊರಗೆ ಸಾಗಿಸಲಾಗಿದೆ. ಈ ದೃಶ್ಯಾವಳಿ ಬ್ಯಾಂಕ್​ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಿಡಿಆರ್​ಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಇಷ್ಟೊಂದು ದೊಡ್ಡಪ್ರಮಾಣ ಹಣ ಯಾರಿಗೆ ಸೇರಿದ್ದು, ಯಾವ ಕಾರಣಕ್ಕೆ ಹೊರಗಡೆ ಕೊಂಡೊಯ್ಯಲಾಗಿದೆ ಎಂಬುದರ ಕುರಿತು ಮಾಹಿತಿ ನೀಡುವಂತೆ ಬ್ಯಾಂಕ್​ ಆಡಳಿತ ಮಂಡಳಿಗೆ ಐಟಿ ಸೂಚಿಸಿದೆ.

    ಬ್ಯಾಂಕ್​ಗೆ ಬರುವ ಕಮಿಷನ್​ ದುಡ್ಡು!

    ಕೆಲ ಸರ್ಕಾರಿ ಅಧಿಕಾರಿಗಳು, ತಮಗೆ ಕಮಿಷನ್​ ರೂಪದಲ್ಲಿ ಪ್ರತಿತಿಂಗಳು ಬರುವ ನಗದು ಹಣವನ್ನು ಈ ಸಹಕಾರಿ ಬ್ಯಾಂಕ್​ಗಳಲ್ಲಿ ಇರಿಸಿದ್ದಾರೆ ಎಂದು ಗೊತ್ತಾಗಿದ್ದು, ಈ ನಿಟ್ಟಿನಲ್ಲಿ ಐಟಿ ತನಿಖೆ ಮುಂದುವರಿದಿದೆ. ಹಣವನ್ನು ಖಾತೆಗಳಿಗೆ ಜಮೆ ಮಾಡಿ, ನಂತರ ಅದೇ ಹಣವನ್ನು ಬೇರೆಬೇರೆ ಉದ್ಯಮಗಳಲ್ಲಿ ಹೂಡಿಕೆ ಮಾಡುವುದು ಹಾಗೂ ವೈಟ್​ಮನಿ ರೂಪದಲ್ಲಿ ಅದೇ ಹಣವನ್ನು ಖಾತೆಗಳಿಂದ ನಗದಾಗಿ ಡ್ರಾ ಮಾಡಿಕೊಳ್ಳಲಾಗಿದೆ.

    ಗ್ರಾಹಕರಂತೆ ಭೇಟಿ ಕೊಟ್ಟು ಪರಿಶೀಲನೆ

    ಸಹಕಾರಿ ಬ್ಯಾಂಕ್​ಗಳ ಮೇಲೆ ಮಾ.31ರಂದು ದಾಳಿ ಮಾಡುವ ಮುನ್ನ ಐಟಿ ಅಧಿಕಾರಿಗಳ ತಂಡ ಗ್ರಾಹಕರ ಸೋಗಿನಲ್ಲಿ ಬ್ಯಾಂಕ್​ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ದಾಳಿ ನಡೆಯುವ ಒಂದೆರಡು ವಾರದ ಮುಂಚೆಯೇ ಎಲ್ಲ ಬ್ಯಾಂಕ್​ಗಳಿಗೆ ಭೇಟಿ ಕೊಟ್ಟು, ಅಲ್ಲಿನ ಆರ್ಥಿಕ ವಹಿವಾಟಿನ ಸಮಗ್ರ ಚಿತ್ರಣ ತಿಳಿದುಕೊಂಡಿದ್ದರು. ದಾಳಿ ನಡೆಸಿದ ತಂಡದಲ್ಲಿ ಅದೇ ಅಧಿಕಾರಿಗಳನ್ನು ಕಂಡು ಬ್ಯಾಂಕ್​ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ.

    ಬ್ಯಾಂಕ್​ಗಳಲ್ಲಿ ಸೊಸೈಟಿಗಳ ವಹಿವಾಟು

    ಬನಶಂಕರಿ 2ನೇ ಹಂತದಲ್ಲಿರುವ ಸಹಕಾರಿ ಬ್ಯಾಂಕ್​ನಲ್ಲಿ ಬೆಂಗಳೂರಿನ ಇನ್ನೆರಡು ಕೋ&ಆಪರೇಟಿವ್​ ಸೊಸೈಟಿಗಳು ಆರ್ಥಿಕ ವಹಿವಾಟು ನಡೆಸಿರುವುದು ಐಟಿ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆಲ ದಿನಗಳ ಮುಂಚೆ ದೊಡ್ಡಮೊತ್ತದ ಹಣವನ್ನು ಡ್ರಾ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಎರಡೂ ಸೊಸೈಟಿಗಳ ಆಡಳಿತ ಮಂಡಳಿಗಳ ಸದಸ್ಯರನ್ನು ಕರೆಸಿ, ವಿಚಾರಣೆ ನಡೆಸಿದ್ದಾರೆ. ಅನುಮಾನಾಸ್ಪದ ವ್ಯವಹಾರ ನಡೆದಿರುವ ಬಗ್ಗೆ ವಿವರಣೆ ಕೊಡುವಂತೆ ಸೂಚನೆ ಕೊಟ್ಟಿದ್ದಾರೆ.

    ದಿವಾಳಿ ಸೊಸೈಟಿ ಅಧ್ಯನಿಂದ ಹಣ ಡ್ರಾ!

    ದಿವಾಳಿಯಾಗಿರುವ ಕೋ ಆಪರೇಟಿವ್​ ಸೊಸೈಟಿಯೊಂದರ ಅಧ್ಯ ಸೊಸೈಟಿ ಹೆಸರಿನಲ್ಲೇ ಸಹಕಾರಿ ಬ್ಯಾಂಕ್​ನಲ್ಲಿ ಆರ್ಥಿಕ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಈತ ಗ್ರಾಹಕರ ಹಣ ದುರ್ಬಳಕೆ ಆರೋಪದಲ್ಲಿ ಬಂಧಿತನಾಗಿ, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ದೊಡ್ಡಮೊತ್ತದ ಹಣ ಡ್ರಾ ಆಗಿರುವುದು ಗೊತ್ತಾದ ನಂತರವೇ ಐಟಿ ಅಧಿಕಾರಿಗಳು ಸಂಬಂಧಪಟ್ಟ ಬ್ಯಾಂಕ್​ಗಳ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

    ಡೀಲ್​ ಕುದುರಿಸಲು ಹೋದವನಿಗೆ ತರಾಟೆ

    ದಾಳಿಗೆ ಒಳಗಾದ ಬ್ಯಾಂಕ್​ನ ನಿರ್ದೇಶಕನೊಬ್ಬ ಕಾರ್ಯಾಚರಣೆ ಸಂದರ್ಭದಲ್ಲೇ ಐಟಿ ಅಧಿಕಾರಿಯ ಜತೆ ಡೀಲ್​ ಕುದುರಿಸಲು ಯತ್ನಿಸಿ, ಹಿಗ್ಗಾಮುಗ್ಗಾ ಬೈಸಿಕೊಂಡಿದ್ದಾನೆ. ಅಕ್ರಮ ವಹಿವಾಟಿನ ಬಗ್ಗೆ ವರದಿ ಮಾಡದಂತೆ ಹಣದ ಆಮಿಷವೊಡ್ಡಲು ಯತ್ನಿಸಿದ ನಿರ್ದೇಶಕನಿಗೆ ಎಲ್ಲರ ಮುಂದೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಪೊಲೀಸರನ್ನು ಕರೆಸಿ, ಅರೆಸ್ಟ್​ ಮಾಡಿಸುವುದಾಗಿಯೂ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಗ್ರಾಹಕರ ದುಡ್ಡಿನಿಂದ ರಿಯಾಲ್ಟಿ ವ್ಯವಹಾರ

    ದಾಳಿಗೊಳಗಾದ ಕೆಲ ಬ್ಯಾಂಕ್​ಗಳಲ್ಲಿ ರಿಯಲ್​ ಎಸ್ಟೇಟ್​ ವ್ಯವಹಾರ ಹಾಗೂ ಗುತ್ತಿಗೆದಾರರು ಆಗಿರುವವರೇ ಅಧ್ಯರು ಹಾಗೂ ನಿರ್ದೇಶಕರಾಗಿದ್ದಾರೆ. ಹೀಗಾಗಿ ಗ್ರಾಹಕರು ಬ್ಯಾಂಕ್​ನಲ್ಲಿಟ್ಟ ಹಣವನ್ನು ರಿಯಲ್​ ಎಸ್ಟೇಟ್​ ಹಾಗೂ ಗುತ್ತಿಗೆ ಕಾಮಗಾರಿಗಳಿಗೆ ಬಳಸಿಕೊಂಡಿರುವುದು ಐಟಿ ತನಿಖೆಯಲ್ಲಿ ದೃಢಪಟ್ಟಿದ್ದು, ಈ ವಿಚಾರವನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯೇ (ಸಿಬಿಡಿಟಿ) ಬಹಿರಂಗಪಡಿಸಿದೆ. ಬ್ಯಾಂಕೊಂದರ ಅಧ್ಯರಿಗೆ ಸೇರಿದ ಕೋಟ್ಯಂತರ ರೂ. ನಗದು ಜಪ್ತಿಯಾಗಿದೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts