ರೈಲು ನಿಲ್ದಾಣಕ್ಕೆ 90 ನಿಮಿಷ ಮುಂಚಿತವಾಗಿ ಬನ್ನಿ, ಇ-ಟಿಕೆಟ್​ ಇದ್ದರಷ್ಟೇ ಪ್ರವೇಶ

Rajdhani Express
Published on

ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ಮಂಗಳವಾರ (ಮೇ 12) ವಿಶೇಷ ರೈಲುಗಳು (ರಾಜಧಾನಿ) ಸಂಚಾರ ಆರಂಭಿಸಲಿವೆ. ಇವುಗಳಲ್ಲಿ ಪ್ರಯಾಣಿಸಲು ಆನ್​ಲೈನ್​ನಲ್ಲಿಯೇ ಟಿಕೆಟ್​ ಕಾದಿರಿಸಬೇಕಾಗುತ್ತದೆ. ಇ-ಟಿಕೆಟ್​ ಇದ್ದರಷ್ಟೇ ರೈಲು ನಿಲ್ದಾಣ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಇನ್ನೊಂದು ಮಹತ್ವದ ಸೂಚನೆ ಎಂದರೆ, ಈ ರೈಲುಗಳಲ್ಲಿ ಹೊದಿಕೆ ಹಾಗೂ ಊಟದ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಪ್ರಯಾಣಿಕರು ತಾವೇ ಹೊಂದಿಸಿಕೊಳ್ಳಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಆದರೆ, ಪ್ಯಾಕ್​ ಮಾಡಿದ ತಿಂಡಿ ತಿನಿಸುಗಳನ್ನು ರೈಲು ಸಿಬ್ಬಂದಿ ಮಾರಾಟ ಮಾಡಲಿದ್ದಾರೆ. ಅಗತ್ಯವಿದ್ದ ಪ್ರಯಾಣಿಕರು ಇವನ್ನು ಖರೀದಿಸಬಹುದು. ರಾಜಧಾನಿ ಎಕ್ಸ್​ಪ್ರೆಸ್​ ರೈಲುಗಳ ಸಂಚರಿಸುವ ಮಾರ್ಗ, ವೇಗದಲ್ಲಿಯೇ ಇವುಗಳು ಸಂಚರಿಸಲಿವೆ. ಟಿಕೆಟ್​ ದರ ಕೂಡ ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಷ್ಟೇ ಇರಲಿದೆ.

ಬೆಂಗಳೂರು, ಚೆನ್ನೈ, ಸಿಕಂದರಾಬಾದ್​, ತಿರುವನಂತಪುರ ಸೇರಿ ದೇಶದ 15 ಪ್ರಮುಖ ರಾಜ್ಯಗಳ ರಾಜಧಾನಿಗೆ ದೆಹಲಿಯಿಂದ ರೈಲುಗಳು ಹೊರಡಲಿವೆ.

ಈ ರೈಲುಗಳು ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿ ಹೊರಡಲಿವೆ. ಹೀಗಾಗಿ ವೇಟಿಂಗ್​ ಲಿಸ್ಟ್​ ಇರುವುದಿಲ್ಲ. ಪ್ರಯಾಣಿಕರಿಗೆ ಹೊದಿಕೆ, ದಿಂಬು ನೀಡಲಾಗುವುದಿಲ್ಲ. ಜತೆಗೆ, ಶೌಚಗೃಹಗಳನ್ನು ಪ್ರಯಾಣದ ವೇಳೆ ಶುಚಿಗೊಳಿಸಲಾಗುವುದಿಲ್ಲ. ಏಕೆಂದರೆ ಈ ಎಲ್ಲ ಕೆಲಸಗಳಿಗೆ ಗುತ್ತಿಗೆ ಸಿಬ್ಬಂದಿ ಲಭ್ಯವಾಗುತ್ತಿಲ್ಲ ಎಂದು ಇಲಾಖೆ ತಿಳಿಸಿದೆ.

ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಜತೆಗೆ, ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಪ್ರಯಾಣಿಕರು ಕನಿಷ್ಠ 90 ನಿಮಿಷ ಮುಂಚಿತವಾಗಿ ಬರಬೇಕೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net