'ಪಬ್ಲಿಕ್ ಐ'ನಲ್ಲಿ ಸಿಕ್ಕಿಬಿದ್ದ ಪೊಲೀಸರು!?; ವಾಹನ ವಿಮೆ ಅವಧಿ ಮುಗಿದು ಒಂದೂವರೆ ವರ್ಷ ಕಳೆದರೂ ನವೀಕರಿಸಿಲ್ಲ!

Tweet
Published on

ಬೆಂಗಳೂರು: ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೆ ಅದನ್ನು ಸಾರ್ವಜನಿಕರೇ ಪೊಲೀಸರಿಗೆ ತಿಳಿಸುವಂಥ 'ಪಬ್ಲಿಕ್ ಐ' ಎಂಬ ವ್ಯವಸ್ಥೆಯನ್ನು ಸಂಚಾರ ಪೊಲೀಸರು ಮಾಡಿಕೊಟ್ಟಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ಅದೆಷ್ಟೋ ಮಂದಿ ಈ ಮೂಲಕ ದಂಡ ತೆರುವಂತಾಗಿದ್ದು ಕೂಡ ಸುಳ್ಳಲ್ಲ. ಆದರೆ ಇದೀಗ ಸಂಚಾರ ನಿಯಮ ಉಲ್ಲಂಘಿಸಿರುವ ಪೊಲೀಸರೇ ಪಬ್ಲಿಕ್​ ಐನಲ್ಲಿ ಅರ್ಥಾತ್ ಸಾರ್ವಜನಿಕರ ನೋಟಕ್ಕೆ ಸಿಕ್ಕಿ ಹಾಕಿಕೊಂಡಿದ್ದು ಸಿಬ್ಬಂದಿ ಜತೆಗೆ ಇಲಾಖೆಗೂ ಮುಜುಗರ ಉಂಟಾಗುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ.

ಪೊಲೀಸ್ ಸಿಬ್ಬಂದಿ ಇಬ್ಬರು ತಮ್ಮ ವಾಹನ ನಿಲ್ಲಿಸಿ ಕರ್ತವ್ಯದಲ್ಲಿದ್ದಾಗ, ಆ ವಾಹನದ ನಂಬರ್ ನಮೂದಿಸಿಕೊಂಡು ಪರೀಕ್ಷಿಸಿದ ಸಾರ್ವಜನಿಕರು ಸರ್ಕಾರದ ಎಂ ಪರಿವಾಹನ್ ಆ್ಯಪ್​ ಮೂಲಕ ವಿವರಗಳನ್ನು ಪರಿಶೀಲಿಸಿದ್ದಾರೆ. ಆಗ ಆ ದ್ವಿಚಕ್ರವಾಹನದ ವಿಮೆ ಅವಧಿ ಮುಗಿದಿರುವುದು ಕಂಡು ಬಂದಿದೆ. 2019ರ ಜುಲೈ 16ಕ್ಕೆ ವಿಮೆ ಅವಧಿ ಮುಗಿದಿದ್ದರೂ ನವೀಕರಿಸದೆ ಅದನ್ನು ಬಳಸುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು (ಫೆ. 25) ಬೆಂಗಳೂರಿನ ಶಿರಸಿ ಸರ್ಕಲ್​ನಲ್ಲಿ ಈ ವಾಹನ ಹಾಗೂ ಪೊಲೀಸರು ಕಂಡು ಬಂದಿದ್ದು, ಮಂಜಿತ್ (@manjith_r) ಎನ್ನುವವರು ಟ್ವಿಟರ್​ನಲ್ಲಿ ಈ ವಿವರಗಳನ್ನು ಪೋಸ್ಟ್ ಮಾಡಿಕೊಂಡು ಬೆಂಗಳೂರು ಪೊಲೀಸರ ಟ್ವಿಟರ್ ಹ್ಯಾಂಡಲ್​ಗೆ ಮೆನ್ಷನ್​ ಮಾಡಿ ಗಮನ ಸೆಳೆದಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net