

Asia Cup: ಏಷ್ಯಾಕಪ್ಗೆ ತಂಡ ಘೋಷಿಸುವ ಸಲುವಾಗಿ ಮಂಗಳವಾರ (ಆಗಸ್ಟ್ 19) ಮುಂಬೈನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರನ್ನು ಪಾಕಿಸ್ತಾನದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸದಂತೆ ಭಾರತೀಯ ಕ್ರಿಕೆಟ್ ಮಂಡಳಿಯ ಪ್ರತಿನಿಧಿ ತಡೆದರು ಎಂದು ವರದಿಯಾಗಿದೆ.
ಏಷ್ಯಾಕಪ್ ಟೂರ್ನಿಗೆ ತಂಡವನ್ನು ಘೋಷಿಸುವಾಗ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅಗರ್ಕರ್ ಅವರಿಗೆ ಪತ್ರಕರ್ತರೊಬ್ಬರು ಪಾಕ್ ಕುರಿತ ಪ್ರಶ್ನೆ ಕೇಳಿದಾಗ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಭಾರತ ಕ್ರಿಕೆಟ್ ತಂಡವು ಸೆಪ್ಟೆಂಬರ್ 14 ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಆಡಲಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಎರಡೂ ದೇಶಗಳ ಕ್ರಿಕೆಟ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.
ಕೇದಾರ್ ಜಾಧವ್ ಮತ್ತು ಹರ್ಭಜನ್ ಸಿಂಗ್ ಅವರಂತಹ ಹಲವಾರು ಮಾಜಿ ಆಟಗಾರರು ಪಾಕಿಸ್ತಾನ ವಿರುದ್ಧ ಆಡದಂತೆ ಬಿಸಿಸಿಐಗೆ ಸಲಹೆ ನೀಡಿದ್ದಾರೆ. ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಎಂಬ ಪ್ರದರ್ಶನ ಪಂದ್ಯಾವಳಿಯಲ್ಲಿ ಭಾರತದ ತಂಡದ ಭಾಗವಾಗಿದ್ದ ಹರ್ಭಜನ್, ಆ ಲೀಗ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ ತಂಡದ ಪ್ರಮುಖ ಸದಸ್ಯರಾಗಿದ್ದರು .
ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವಂತೆ ಜಾಧವ್ ರಾಷ್ಟ್ರೀಯ ತಂಡವನ್ನು ಒತ್ತಾಯಿಸಿದ್ದಾರೆ. ಭಾರತ ತಂಡ ಈ ಪಂದ್ಯ ಆಡಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಭಾರತ ಆಡುವುದಿಲ್ಲ ಎಂದು ಬಲವಾಗಿ ನಂಬುತ್ತೇನೆ ಎಂದು ಜಾಧವ್ ತಿಳಿಸಿರುವುದಾಗಿ ಮೂಲಗಳ ಮಾಹಿತಿ.(ಏಜೆನ್ಸೀಸ್)