

ಬೆಂಗಳೂರು: ಬಿಜೆಪಿ ಜತೆ ಪ್ರತ್ಯೇಕ- ಪರೋಕ್ಷ ಸಂಬಂಧ ಇಲ್ಲದೇ ಸ್ವಚ್ಛವಾಗಿದ್ದೀವೆ ಎನ್ನುವ ಒಂದು ರಾಜಕೀಯ ಪಕ್ಷ ಇದ್ರೆ ಹೇಳಿ? ಎಂದು ಮಾಜಿ ಪ್ರಧಾನಿ ದೇವೇಗೌಡ ಸವಾಲು ಹಾಕಿದರು.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಜತೆ ಕೇವಲ ಮೊದಲ ಹಂತದಲ್ಲಿ ಮಾತ್ರ ಮೈತ್ರಿ ಬಗ್ಗೆ ಚರ್ಚೆ ನಡೆದಿದೆ. ಮೈತ್ರಿ ಆದರೆ ಮುಸ್ಲಿಮರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ನಾನು ಬದುಕಿರುವವರೆಗೂ ಅದು ಸಾಧ್ಯವಿಲ್ಲ. ಮುಸ್ಲಿಮರನ್ನು ಉಳಿಸಿಕೊಳ್ತೇವೆ. ಯಾವ ಆತಂಕವೂ ಬೇಡ ಎಂದು ಸ್ಪಷ್ಟಪಡಿಸಿದರು.
ನಮ್ಮ ಮನಸ್ಸಲ್ಲಿ ಕಿಂಚಿತ್ತೂ ಸೆಕ್ಯುಲರ್ ತೆಗೆದು ಹಾಕುವ ಆಲೋಚನೆ ಇಲ್ಲ. ಮುಂದೆಯೂ ನಾವು ಅಂತಹ ವಿಚಾರ ಮಾಡುವುದಿಲ್ಲ. ಇದನ್ನು ಖಚಿತವಾಗಿ ಹೇಳುತ್ತೇನೆ ಎನ್ನುವ ಮೂಲಕ ತಮ್ಮ ಪಕ್ಷದ ನಾಯಕರು ಹಾಗೂ ತಮ್ಮ ಸೆಕ್ಯುಲರಿಸಂ ಬಗ್ಗೆ ಕುಹಕವಾಡುತ್ತಿದ್ದವರಿಗೆ ಸ್ಪಷ್ಟ ಉತ್ತರ ಕೊಟ್ಟರು.
ಯಾವುದೇ ಸಮುದಾಯಕ್ಕೆ ಈ ಪಕ್ಷದಿಂದ ಅನ್ಯಾಯ ಆಗಲು ಬಿಡಲ್ಲ ಎಂದು ಹೇಳಿದರು. ಮೈತ್ರಿ ಕುರಿತು ಮೊದಲ ಬಾರಿಗೆ ಗೃಹ ಸಚಿವ ಬಳಿ ಚರ್ಚೆ ಮಾಡಿದ್ದೆ. ಪ್ರಧಾನಿ ಮೋದಿಯವರು ತುಂಬಾ ಬ್ಯುಸಿ ಇದ್ದರು.ಅದಕ್ಕೆ ಚರ್ಚೆ ಮಾಡಿಲ್ಲ. ನಾನು ಎಲ್ಲಾ ಶಾಸಕರು, ಎಂಎಲ್ಸಿಗಳ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.
ಮೈತ್ರಿಗೆ ಶಾಸಕಿ ಕರೆಮ್ಮ ವಿರೋಧದ ಕುರಿತ ಪ್ರಶ್ನೆಗೆ, ನಾನು ಕರೆಮ್ಮ ಜತೆ ಚರ್ಚೆ ಮಾಡಿದ್ದೇನೆ. ಕುಮಾರಸ್ವಾಮಿ, ನೀವು ಬದುಕಿರುವವರೆಗೂ ನಮ್ಮನ್ನು ನಿಮ್ಮನ್ನು ಯಾರು ಬೇರೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ನೀವು, ಕುಮಾರಸ್ವಾಮಿ ಬದುಕಿರುವವರೆಗೂ ನಾನು ಯಾವುದೇ ಪಕ್ಷದ ಕಡೆ ಹೋಗಲ್ಲ ಎಂದು ಪ್ರಮಾಣ ಮಾಡಿದ್ದಾರೆ ಎಂದು ದೇವೇಗೌಡ ತಿಳಿಸಿದರು.