ನವದೆಹಲಿ: ನೂತನ ಕೋಚ್ ಗೌತಮ್ ಗಂಭೀರ್ ಸಾರಥ್ಯದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಸರಣಿ ಆಡಿದ ಟೀಮ್ ಇಂಡಿಯಾಗೆ ಮಿಶ್ರಫಲ ಲಭಿಸಿತ್ತು. ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ಭಾರತ ತಂಡವು, ಏಕದಿನ ಸರಣಿಯಲ್ಲಿ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಇದರಲ್ಲಿ ಪ್ರಮುಖವಾಗಿ ಭಾರತದ ಬ್ಯಾಟ್ಸ್ಮನ್ಗಳು ಎಡವಿದ್ದು, ಶ್ರೀಲಂಕಾದ ಸ್ಪಿನ್ ದಾಳಿಗೆ ಎಂದರೆ ತಪ್ಪಾಗಲಾರದು. ಟೀಮ್ ಇಂಡಿಯಾದಲ್ಲಿ ಪ್ರಸ್ತುತ ಸ್ಪಿನ್ನರ್ಸ್ ಇಲ್ಲದೇ ಇರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದ್ದು, ಈ ಬಗ್ಗೆ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ನನ್ನ ಪ್ರಕಾರ ಭಾರತ ಕ್ರಿಕೆಟ್ ತಂಡದ ಆಟಗಾರರು ರೆಡ್ ಬಾಲ್ ಕ್ರಿಕೆಟ್ಅನ್ನು ಕಡಿಮೆ ಆಡುವುದೇ ಇದಕ್ಕೆ ಕಾರಣ ಎಂದು ಭಾವಿಸುತ್ತೇನೆ. ಹೆಚ್ಚು ವೈಟ್ ಬಾಲ್ ಕ್ರಿಕೆಟ್ ಆಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಟಿ20 ಹಾಗೂ ಏಕದಿನ ಸರಣಿಗಳಲ್ಲಿ ನಾವು ನಿಗದಿತ ಓವರ್ಗಳನ್ನು ಎಸೆಯುತ್ತೇವೆ. ಆದರೆ, ರೆಡ್ ಬಾಲ್ ಕ್ರಿಕೆಟ್ನಲ್ಲಿ ಹಾಗಾಗುವುದಿಲ್ಲ. ದೇಶೀಯ ಕ್ರಿಕೆಟ್ನಲ್ಲಿ ಸ್ಪಿನ್ ಆಡಲು ಸಿಗುವಷ್ಟು ಅವಕಾಶ ನಿಮಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುವುದಿಲ್ಲ.
ನನ್ನ ಪ್ರಕಾರ ಪ್ರಸ್ತುತ ಭಾರತ ತಂಡದಲ್ಲಿ ಯಾವುದೇ ಗುಣಮಟ್ಟದ ಸ್ಪಿನ್ನರ್ಗಳಿಲ್ಲದೇ ಇರುವುದು ಇದಕ್ಕೆ ಮುಖ್ಯ ಕಾರಣ ಎಂದು ಭಾವಿಸುತ್ತೇನೆ. ಏಕೆಂದರೆ ನಮ್ಮ ಕಾಲದಲ್ಲಿ, ದ್ರಾವಿಡ್, ಸಚಿನ್, ಗಂಗೂಲಿ, ಲಕ್ಷ್ಮಣ್, ಯುವರಾಜ್, ನಾವೆಲ್ಲರೂ ದೇಶೀಯ ಕ್ರಿಕೆಟ್‌ನಲ್ಲಿಯೂ ಆಡುತ್ತಿದ್ದೆವು, ಅದು ಏಕದಿನ ಅಥವಾ ಟೆಸ್ಟ್ ಪಂದ್ಯಗಳಾಗಿರಲಿ. ಆ ಪಂದ್ಯಗಳಲ್ಲಿ ಬಹಳಷ್ಟು ಸ್ಪಿನ್ನರ್‌ಗಳನ್ನು ಎದುರಿಸುತ್ತಿದ್ದೆವು. ಆದರೆ ಇಂದಿನ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಆಟಗಾರರು ಕಡಿಮೆ ಸಮಯವನ್ನು ಪಡೆಯುತ್ತಿದ್ದಾರೆ, ಇದರಿಂದಾಗಿ ಸ್ಪಿನ್ ಆಡುವ ಕೌಶಲ್ಯವು ಆಟಗಾರರಿಂದ ಅಭಿವೃದ್ಧಿಯಾಗುತ್ತಿಲ್ಲ. ರೋಹಿತ್ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರು ಕೂಡ ಸ್ಪಿನ್ ಎದುರು ಆಟವಾಡಲು ಪರದಾಡುತ್ತಾರೆ. ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.