More

    ವಿಶ್ವ ಕ್ರಿಕೆಟ್​ನಲ್ಲಿ ರೋಹಿತ್​ರಂತಹ ಆಟಗಾರ ಇನ್ನೊಬ್ಬನಿಲ್ಲ! ಈ ತಾಕತ್ತಿರೋದು ಹಿಟ್​ಮ್ಯಾನ್​ಗೆ ಮಾತ್ರ

    ನವದೆಹಲಿ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ಪ್ರಸಕ್ತ ವಿಶ್ವಕಪ್​ನಲ್ಲಿ ಕೇವಲ ದಾಖಲೆಗಳನ್ನು ಮಾತ್ರ ತಮ್ಮ ಹೆಸರಿಗೆ ಬರೆದುಕೊಳ್ಳುತ್ತಿಲ್ಲ, ಅದರೊಂದಿಗೆ ಉತ್ತಮ ನಾಯಕತ್ವ ಹಾಗೂ ವಿಶೇಷ ವ್ಯಕ್ತಿತ್ವದಿಂದ ಕ್ರಿಕೆಟ್​ ದಿಗ್ಗಜರು ಸೇರಿದಂತೆ ಕ್ರೀಡಾ ಜಗತ್ತಿನ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ವಿಶ್ವ ಕ್ರಿಕೆಟ್​ನಲ್ಲೇ ರೋಹಿತ್​ರಂತಹ ಆಟಗಾರ ಇನ್ನೊಬ್ಬ ಇಲ್ಲ ಎಂದು ಪಾಕಿಸ್ತಾನದ ಕ್ರಿಕೆಟ್​ ದಿಗ್ಗಜ ಹಾಗೂ ಶ್ರೇಷ್ಠ ಎಡಗೈ ವೇಗಿ ವಾಸಿಂ ಅಕ್ರಮ್​ ಕೊಂಡಾಡಿದ್ದಾರೆ.

    Wasim akramನಿನ್ನೆ (ನ.12) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 160 ರನ್​ಗಳ ಭಾರೀ ಅಂತರದಲ್ಲಿ ಗೆಲುವು ದಾಖಲಿಸಿತು. ಸತತ 9ನೇ ಗೆಲುವಿನೊಂದಿಗೆ ಗ್ರೂಪ್​ ಹಂತದ ಪಂದ್ಯಗಳನ್ನು ಮುಗಿಸಿರುವ ಭಾರತ ನ.15ರಂದು ನ್ಯೂಜಿಲೆಂಡ್​ ವಿರುದ್ಧ ಮೊದಲ ಸೆಮಿಫೈನಲ್​ನಲ್ಲಿ ಸೆಣಸಾಡಲಿದೆ.

    ಭಾರತದ ಗೆಲುವಿನ ಬಗ್ಗೆ ಚರ್ಚೆ ಮತ್ತು ವಿಶ್ಲೇಷಣೆ ಮಾಡುತ್ತಾ, ಪಾಕಿಸ್ತಾನದ ಸ್ಪೋರ್ಟ್ಸ್​ ಚಾನೆಲ್​ ಎ ಸ್ಪೋರ್ಟ್ಸ್‌ನ ಪ್ರಮುಖ ಪ್ಯಾನೆಲಿಸ್ಟ್‌ಗಳಾದ ವಾಸಿಂ ಅಕ್ರಮ್​, ಶೋಯಿಬ್​ ಮಲಿಕ್​ ಮತ್ತು ಮಿಸ್ಬಾ ಉಲ್​ ಹಕ್​, ಭಾರತ ತಂಡವನ್ನು ಮನಸಾರೆ ಹೊಗಳಿದರು. ಅದರಲ್ಲೂ ಪಾಕ್​ನ ಈ ಮೂವರು ಮಾಜಿ ಆಟಗಾರರು ರೋಹಿತ್​ರನ್ನು ವಿಶೇಷವಾಗಿ ಕೊಂಡಾಡಿದರು. ಭಾರತದ ಅಮೋಘ ಬ್ಯಾಟಿಂಗ್​ ಪ್ರದರ್ಶನದ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರಿಸಿದ ಅಕ್ರಮ್​, ಹೌದು 4 ವಿಕೆಟ್​ಗೆ 50 ಓವರ್​ಗಳಲ್ಲಿ 410 ರನ್​. ಅದರಲ್ಲಿ ರೋಹಿತ್​ 61 ರನ್​ ಮತ್ತು ಶುಭಮಾನ್​ ಗಿಲ್​ 32ಕ್ಕೆ 51 ರನ್​. ಕೇವಲ 10 ಓವರ್​ಗಳಲ್ಲಿ ಇಬ್ಬರು 91 ರನ್​ ಕಲೆಹಾಕಿದರು. ಅಲ್ಲಿಗೆ ಆಟದ ಫಲಿತಾಂಶ ನಿಖರವಾಗಿತ್ತು. ರೋಹಿತ್​ ಕೇವಲ 54 ಎಸೆತಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್​ನೊಂದಿಗೆ 61 ರನ್​ ಬಾರಿಸಿದರು. ವಿಶ್ವ ಕ್ರಿಕೆಟ್​ನಲ್ಲಿ ರೋಹಿತ್​ರಂತಹ ಮತ್ತೊಬ್ಬ ಆಟಗಾರ ಇನ್ನೊಬ್ಬ ಇಲ್ಲ ಎಂದು ನನಗನಿಸುತ್ತದೆ ಎಂದು ವಾಸಿಂ ಅಕ್ರಮ್​ ಮೆಚ್ಚುಗೆ ವ್ಯಕ್ತಪಡಿಸಿದರು.

    ನಾವು ವಿರಾಟ್​ ಕೊಹ್ಲಿ, ಜೋ ರೂಟ್​, ಕೇನ್​ ವಿಲಿಯಮ್ಸನ್​, ಬಾಬರ್​ ಅಜಮ್​ ಬಗ್ಗೆ ಮಾತನಾಡುತ್ತೇವೆ. ಆದರೆ, ಈ ಮನುಷ್ಯ (ರೋಹಿತ್​ ಶರ್ಮ) ತುಂಬಾ ವಿಭಿನ್ನ. ಏಕೆಂದರೆ ರೋಹಿತ್​ ಅವರು ಯಾವುದೇ ಪರಿಸ್ಥಿತಿಯಲ್ಲಿ ಮತ್ತು ಯಾವುದೇ ಬ್ಯಾಟಿಂಗ್ ಅನ್ನು ಸುಲಭವಾಗಿ ಕಾಣುತ್ತಾರೆ. ಯಾವುದೇ ಬೌಲಿಂಗ್​ನಲ್ಲೂ ರೋಹಿತ್​ ಸಲೀಸಾಗಿ ಬ್ಯಾಟ್​ ಬೀಸುತ್ತಾರೆ. ಇಂತಹ ತಾಕತ್ತು ರೋಹಿತ್​ಗೆ ಮಾತ್ರ ಇರುವುದು ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಶೋಯಿಬ್​ ಮಲ್ಲಿಕ್​, ರೋಹಿತ್​ ಅವರು ಎದುರಾಳಿಯ ಎಲ್ಲ ಐದು ಬೌಲರ್‌ಗಳ ವಿರುದ್ಧ ಸುಲಭವಾಗಿ ರನ್ ಗಳಿಸಿದರು. ವಾಸಿಂ ಅಕ್ರಮ್​ ಹೇಳಿದ ಬ್ಯಾಟರ್​ಗಳು ಎಲ್ಲ ಐವರು ಬೌಲರ್​ಗಳನ್ನು ಸುಲಭವಾಗಿ ಎದುರಿಸಿಲ್ಲ. ಕೇವಲ 2 ಅಥವಾ ಮೂವರು ಬೌಲರ್​ಗಳನ್ನು ಎದುರಿಸಿದ್ದಾರೆ. ಆದರೆ, ರೋಹಿತ್​ ಮಾತ್ರ ಎಲ್ಲ ಐವರು ಬೌಲರ್​ಗಳನ್ನು ಸುಲಭವಾಗಿ ಎದುರಿಸಿದ್ದಾರೆ ಎಂದರು.

    ಮಾತು ಮುಂದುವರಿಸಿದ ವಾಸಿಂ ಅಕ್ರಮ್​, ರೋಹಿತ್​ ಕ್ರೀಸ್​ಗೆ ಆಗಮಿಸುತ್ತಿದ್ದಂತೆ ಆಟದ ಗತಿಯನ್ನೇ ಬದಲಿಸುತ್ತಾರೆ ಮತ್ತು ಎದುರಾಳಿ ಬೌಲರ್​ಗಳನ್ನು ಸಂಪೂರ್ಣ ಆಫ್​ ಗೇರ್​ಗೆ ಎಸೆದುಬಿಡುತ್ತಾರೆ. ಮೊದಲ ಎಸೆತದಿಂದಲೇ ರೋಹಿತ್​ ಅಬ್ಬರಿಸುತ್ತಾರೆ. ನಾವು ಅತಿ ಹೆಚ್ಚು ರನ್​ ಗಳಿಸಬೇಕು ಎಂಬ ಉದ್ದೇಶದಿಂದಲೇ ರೋಹಿತ್​ ಕ್ರೀಸ್​ಗೆ ಇಳಿಯುತ್ತಾರೆ. ಯಾವುದೇ ತ್ರಾಸು ಇಲ್ಲದೆ ವೇಗಿಗಳನ್ನು ಸಮರ್ಥವಾಗಿ ಎದುರಿಸುವ ರೋಹಿತ್​, ಸಹ ಆರಂಭಿಕ ಆಟಗಾರನೊಂದಿಗೆ ಕೇವಲ 5.5 ಓವರ್​ಗಳಲ್ಲೇ 50 ರನ್​ ಗಡಿ ದಾಟುತ್ತಿದ್ದಾರೆ. ಯಾವುದೇ ಅಳುಕಿಲ್ಲದೆ ಕ್ರೀಸ್ ಬಿಟ್ಟು ಬಂದು ನಿರಾತಂಕದಿಂದ ಬ್ಯಾಟ್​ ಬೀಸುತ್ತಿದ್ದಾರೆ ಎಂದಿದ್ದಾರೆ.

    ಸತತ ಎರಡು ವಿಶ್ವಕಪ್​ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್​ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್​ ಶರ್ಮ ಪಾತ್ರರಾಗಿದ್ದಾರೆ. 2019ರ ವಿಶ್ವಕಪ್​ನಲ್ಲಿ ರೋಹಿತ್​ 648 ರನ್​ ಗಳಿಸಿದ ರೋಹಿತ್​ ಪ್ರಸಕ್ತ ವಿಶ್ವಕಪ್​ನಲ್ಲಿ 500ಕ್ಕೂ ಅಧಿಕ ರನ್​ ಕಲೆ ಹಾಕಿದ್ದಾರೆ.

    ನಿನ್ನೆಯ ಪಂದ್ಯದ ಫಲಿತಾಂಶ
    ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 411ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್​ ಪಡೆ 47.5 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 250 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್​ ಇಂಡಿಯಾ 160 ರನ್​ಗಳ ಭಾರೀ ಅಂತರದಿಂದ ಗೆಲುವಿನ ಕೇಕೆ ಹಾಕಿತು. ತಂಡದ ಪರ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (45), ತೇಜ ನಿಡಮನೂರು (54), ಕಾಲಿನ್ ಅಕರ್ಮನ್ (35) ಹೊರತುಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ.

    ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಭಾರತ ನಿಗದಿತ 50 ಓವರ್​ಗಳಲ್ಲಿ ಕೇವಲ 4 ವಿಕೆಟ್​ ನಷ್ಟಕ್ಕೆ 410 ರನ್​ ಕಲೆ ಹಾಕಿತು. ಬ್ಯಾಟ್​ ಹಿಡಿದು ಕ್ರೀಡಾಂಗಣಕ್ಕಿಳಿದ ಟೀಮ್​ ಇಂಡಿಯಾದ ಪ್ರತಿ ಬ್ಯಾಟರ್​ಗಳು ಸಹ ರನ್​ ಮಾರುತವನ್ನೇ ಸೃಷ್ಟಿಸಿದರು. ರೋಹಿತ್​ ಶರ್ಮ (61 ರನ್​, 54 ಎಸೆತ, 8 ಬೌಂಡರಿ, 2 ಸಿಕ್ಸರ್​) ಮತ್ತು ಶುಭಮಾನ್​ ಗಿಲ್​ (51 ರನ್​, 32 ಎಸೆತ, 3 ಬೌಂಡರಿ, 4 ಸಿಕ್ಟರ್​) 100 ರನ್​ಗಳ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಹಿಡಿದು ಮೈದಾನಕ್ಕಿಳಿದ ವಿರಾಟ್​ ಕೊಹ್ಲಿ ಸಹ ನೆದರ್ಲೆಂಡ್ಸ್​ ಬೌಲರ್​ಗಳನ್ನು ಕಾಡಿದರು. 56 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ಬೌಂಡರಿ 1 ಸಿಕ್ಸರ್​ ನೆರವಿನಿಂದ 51 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದ ಶ್ರೇಯಸ್​ ಅಯ್ಯರ್ ( ಅಜೇಯ 128 ರನ್​, 94 ಎಸೆತ, 10 ಬೌಂಡರಿ, 5 ಸಿಕ್ಸರ್​)​ ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಕೆ.ಎಲ್​. ರಾಹುಲ್​ (102 ರನ್​, 64 ಎಸೆತ, 11 ಬೌಂಡರಿ, 4 ಸಿಕ್ಸರ್​) ದ್ವಿಶತಕ ಜತೆಯಾಟದೊಂದಿಗೆ ಉತ್ತಮ ಇನಿಂಗ್ಸ್​ ಆಡಿದರು. ನೆದರ್ಲೆಂಡ್ಸ್​ ಬೌಲರ್​ಗಳನ್ನು ಅಕ್ಷರಶಃ ಬೆಂಡತ್ತಿದ ಈ ಜೋಡಿ ಎರಡು ವೈಯಕ್ತಿಕ ಶತಕಗಳೊಂದಿಗೆ ಭಾರತ ತಂಡ 410 ರನ್​ಗಳ ಬೃಹತ್​ ಗುರಿಯನ್ನು ಮುಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯಲ್ಲಿ ಸೂರ್ಯಕುಮಾರ್​ ಯಾದವ್​ 2 ರನ್​ ಗಳಿಸಿ ಅಜೇಯರಾಗಿ ಉಳಿದರು.

    ಸೆಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು
    ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

    ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ
    ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    VIDEO| ರೋಹಿತ್ ಶರ್ಮ​ ಬೌಲಿಂಗ್​ ಸ್ಟೈಲ್​ಗೆ ಪತ್ನಿ ಕ್ಲೀನ್​ ಬೋಲ್ಡ್​! ವೈರಲ್​ ಆಯ್ತು ರಿತಿಕಾ ರಿಯಾಕ್ಷನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts