

ಬೆಂಗಳೂರು: ಇನ್ನು ಮುಂದೆ ಬೆಳಗಿನ ಜಾವದ ಆಜಾನ್‌ಗೆ ಲೌಡ್‌ಸ್ಪೀಕರ್ ಬಳಸದಿರಲು ಮುಸ್ಲಿಂ ಮುಖಂಡರು ನಿರ್ಧಾರ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ವಿವಿಧ ಮಸೀದಿಗಳ ಮುಖ್ಯಸ್ಥರು, ಮುಸ್ಲಿಂ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸುಪ್ರೀಂ ಕೋರ್ಟ್‌ನ ಆದೇಶ ಮತ್ತು ರಾಜ್ಯ ಸರ್ಕಾರದ ಇತ್ತೀಚಿನ ಮಾರ್ಗಸೂಚಿಯನ್ನು ಎಲ್ಲ ಮಸೀದಿಗಳು ಪಾಲಿಸಬೇಕು. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಲೌಡ್‌ಸ್ಪೀಕರ್ ಬಳಸದಿರಲು ಸುಪ್ರೀಂಕೋರ್ಟ್ ಸೂಚನೆ ಇದೆ. ಆದ್ದರಿಂದ ಬೆಳಗಿನ ಆಜಾನ್‌ಗೆ ಇನ್ನು ಮುಂದೆ ಯಾವುದೇ ಮಸೀದಿಯವರೂ ಲೌಡ್‌ಸ್ಪೀಕರ್ ಬಳಸಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ತೀರ್ಮಾನ ಬೆಳಗಿನ ಜಾವದ ಅಜಾನ್‌ಗೆ ಮಾತ್ರ ಅನ್ವಯವಾಗುತ್ತದೆ. ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ಬಳಸದೇ ಆಜಾನ್ ಕೂಗಬೇಕು. ಆದರೆ ದಿನದ ಬೇರೆ ಸಮಯದ ಆಜಾನ್‌ಗೆ ಲೌಡ್‌ಸ್ಪೀಕರ್ ಬಳಸಲಾಗುವುದು. ಅದಕ್ಕೆ ರಾಜ್ಯ ಸರ್ಕಾರ ಹೇಳಿರುವಂತೆ ಸಂಬಂಧ ಪಟ್ಟ ಅಧಿಕಾರಿಗಳ ಅನುಮತಿಯನ್ನು ಎಲ್ಲ ಮಸೀದಿಗಳು ಪಡೆಯಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.