

ನವದೆಹಲಿ: ಲಡಾಖ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆ ಎದುರಾಗಿದೆ. ಭಾರತದಲ್ಲಿ ಚೀನಾ ವಿರೋಧಿ ಮನೋಭಾವ ಹೆಚ್ಚಾಗುತ್ತಿದ್ದು, ಚೀನಾ ಮೂಲದ ಆ್ಯಪ್ಗಳನ್ನು ಈಗಾಗಲೆ ನಿರ್ಬಂಧಿಸಲಾಗಿದೆ. ಇದೀಗ ಅಲ್ಲಿನ ಉತ್ಪನ್ನಗಳ ಬಳಕೆಯನ್ನು ನಿಲ್ಲಿಸಲು ಜನರು ನಿರ್ಧರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ಕೂಡ ಭಾರತ ವಿರೋಧಿ ಮನೋಭಾವ ದಟ್ಟವಾಗುತ್ತಿದೆ. ಆದರೆ, ಬಳಕೆಯನ್ನು ನಿಷೇಧಿಸಲು ಚೀನಾದಲ್ಲಿ ಭಾರತದ ಯಾವುದೇ ಉತ್ಪನ್ನಗಳು ಇಲ್ಲ ಎಂದು ಸ್ಥಳೀಯ ವ್ಯಾಪಾರಸ್ಥರು ಲೇವಡಿ ಮಾಡಿದ್ದಾರೆ.
ಚೀನಾ ಮೂಲದ 59 ಆ್ಯಪ್ಗಳ ಬಳಕೆಯನ್ನು ನಿಷೇಧಿಸುವ ಭಾರತ ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿ ಹ್ಯು ಕ್ಸಿಜಿನ್ ಎಂಬುವರು, ಚೀನಾದ ಜನತೆ ಬ್ಯಾನ್ ಮಾಡಲು ಬಯಸಿದರೂ ಚೀನಾ ಮಾರುಕಟ್ಟೆಯಲ್ಲಿ ಭಾರತದ ಯಾವುದೇ ವಸ್ತುಗಳು ಕಾಣುತ್ತಿಲ್ಲ. ಭಾರತೀಯ ಮಿತ್ರರೇ, ರಾಷ್ಟ್ರೀಯವಾದ, ರಾಷ್ಟ್ರಪ್ರೇಮಕ್ಕಿಂತಲೂ ಮಿಗಿಲಾದದ್ದನ್ನು ಹೊಂದುವುದು ಮುಖ್ಯ ಎಂದು ಟ್ವೀಟ್ ಮಾಡಿ ಸ್ವಾಭಿಮಾನವನ್ನು ಕೆಣಕಿದ್ದಾರೆ.
ಈ ಟ್ವೀಟ್ ಅನ್ನು ಉಲ್ಲೇಖಿಸಿರುವ ಭಾರತದ ಪ್ರತಿಷ್ಠಿತ ವಾಣಿಜ್ಯೋದ್ಯಮಿ ಆನಂದ್ ಮಹೀಂದ್ರಾ, ಈ ರೀತಿ ಲೇವಡಿ ಮಾಡಿದ್ದಕ್ಕಾಗಿ ಧನ್ಯವಾದಗಳು. ನಾವು ಈ ಪರಿಸ್ಥಿತಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಪುಟಿದೇಳುತ್ತೇವೆ ಎಂದು ಪ್ರತಿಟ್ವೀಟ್ ಮಾಡಿದ್ದಾರೆ.
ನಿನ್ನ ಈ ವ್ಯಂಗ್ಯಭರಿತ ಟ್ವೀಟ್ ನಮ್ಮ ನಾಡಿನವರ ಅದರಲ್ಲೂ ಭಾರತೀಯ ವಾಣಿಜ್ಯೋದ್ಯಮದ ಪ್ರತಿಯೊಬ್ಬರ ಮೇಲೂ ಭಾರಿ ಪರಿಣಾಮ ಉಂಟು ಮಾಡುವ ಜತೆಗೆ ಸ್ಫೂರ್ತಿ ಉಕ್ಕಿಸುತ್ತದೆ ಎಂಬ ನಂಬಿಕೆ ನನಗಿದೆ. ಇಂಥ ಟ್ವೀಟ್ ಮೂಲಕ ನಮ್ಮಲ್ಲಿನ ಸ್ವಾಭಿಮಾನವನ್ನು ಕೆಣಕಿದ್ದಕ್ಕಾಗಿ ಧನ್ಯವಾದಗಳು. ನಾವೆಲ್ಲರೂ ಒಟ್ಟಾಗಿ ಪರಿಸ್ಥಿತಿ ಸೂಕ್ತವಾಗಿ ಸ್ಪಂದಿಸಿ ಪುಟಿದೇಳುತ್ತೇವೆ, ನಮ್ಮತನವನ್ನು ಕಾಯ್ದುಕೊಳ್ಳುತ್ತೇವೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.