

ಮುಂಬೈ: ಏಕದಿನ ವಿಶ್ವಕಪ್ನಲ್ಲಿ ಮುಂಬೈ ಮತ್ತು ನವದೆಹಲಿಯಲ್ಲಿ ನಡೆಯುವ ಪಂದ್ಯಗಳ ವೇಳೆ ಸುಡುಮದ್ದುಗಳ ಪ್ರದರ್ಶನಕ್ಕೆ ಬಿಸಿಸಿಐ ನಿರ್ಬಂಧ ಹೇರಿದೆ.
ಇವೆರಡು ನಗರಗಳ ಗಾಳಿಯ ಗುಣಮಟ್ಟ ಕೆಟ್ಟದಾಗಿದ್ದು, ಇನ್ನಷ್ಟು ವಾಯುಮಾಲಿನ್ಯವನ್ನು ತಡೆಯುವ ಸಲುವಾಗಿ ಬಿಸಿಸಿಐ ಈ ಕ್ರಮ ತೆಗೆದುಕೊಂಡಿದೆ. ದೆಹಲಿಯಲ್ಲಿ ಇನ್ನು ಬಾಂಗ್ಲಾ-ಶ್ರೀಲಂಕಾ (ನ.6) ನಡುವಿನ 1 ಪಂದ್ಯವಷ್ಟೇ ಬಾಕಿ ಉಳಿದಿದ್ದರೆ, ಮುಂಬೈನಲ್ಲಿ ಸೆಮಿಫೈನಲ್ ಸಹಿತ ಇನ್ನೂ 3 ಪಂದ್ಯಗಳು ಬಾಕಿ ಇವೆ.
'ನಾನೇ ಖುದ್ದಾಗಿ ಐಸಿಸಿ ಜತೆ ಚರ್ಚಿಸಿ ಸುಡುಮದ್ದು ಪ್ರದರ್ಶನ ತಡೆದಿರುವೆ. ಪರಿಸರ ಜಾಗೃತಿಯ ಸೂಕ್ಷ್ಮತೆಯನ್ನು ಬಿಸಿಸಿಐ ಅರಿತಿದೆ ಮತ್ತು ಇದಕ್ಕೆ ಬದ್ಧವಾಗಿದೆ' ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ.