

ಬೆಂಗಳೂರು: ಪಾಲಿಕೆ ಕೇಂದ್ರ ಕಚೇರಿ ಆವರಣದ ‘ಗುಣ ನಿಯಂತ್ರಣ ಪ್ರಯೋಗಾಲಯ’ ಕಚೇರಿಯಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇದರ ಪರಿಣಾಮ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಗಂಭೀರ ಗಾಯವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನಗರದಲ್ಲಿರುವ ಬಿಬಿಎಂಪಿಯ ಶೇ.70 ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲದಂತಾಗಿದೆ. ರಾಷ್ಟ್ರೀಯ ಕಟ್ಟಡ ಸಂಹಿತೆ (ಎನ್ಬಿಸಿ) ನಿಯಮದಂತೆ ಪರೀಕ್ಷೆ ಮತ್ತು ಪ್ರಯೋಗ ಮಾಡುವ ಯಾವುದೇ ಕಚೇರಿಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇರಬೇಕಿತ್ತು. ಈ ವ್ಯವಸ್ಥೆ ಇಲ್ಲದಿರುವ ಕಾರಣ ಆ.11ರಂದು ಪಾಲಿಕೆಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಮುಖ್ಯ ಅಭಿಯಂತರ ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಕಿರಣ್, ಸಂತೋಷ್ ಕುಮಾರ್, ವಿಜಯಮಾಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ಪ್ರಥಮ ದರ್ಜೆ ಸಹಾಯಕ ಸಿರಾಜ್, ಆಪರೇಟರ್ ಜ್ಯೋತಿ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್ ಗಣಕಯಂತ್ರ ನಿರ್ವಾಹಕ ಮನೋಜ್ಗೆ ಸುಟ್ಟ ಗಾಯವಾಗಿತ್ತು.
ಜತೆಗೆ, ಬೆಂಕಿ ಹೊತ್ತಿಕೊಂಡಾಗ ಪ್ರಯೋಗಾಲಯದಲ್ಲಿ ಅಗ್ನಿಶಾಮಕ ಉಪಕರಣಗಳೂ ಇರಲಿಲ್ಲ. ಬೆಂಕಿ ನಂದಿಸಲು ಬೇರೆ ಕಡೆಡೆಯಿಂದ ಯಂತ್ರಗಳನ್ನು ತರಬೇಕಿತ್ತು. ಅಷ್ಟೊರಳಗೆ ಎಲ್ಲರಿಗೂ ಗಂಭೀರ ಗಾಯವಾಗಿತ್ತು. ಗಾಯಾಳುಗಳನ್ನು ವಿಕ್ಟೋರಿಯಾದ ತುರ್ತು ಮತ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿ ಸುರಕ್ಷತಾ ವ್ಯವಸ್ಥೆ ಇದ್ದಿದ್ದರೆ ಇವರಿಗೆ ಗಂಭೀರ ಗಾಯವಾಗುತ್ತಿರಲಿಲ್ಲ.
ಪ್ರಮಾಣಪತ್ರ ಕಡ್ಡಾಯ: ಪಾಲಿಕೆಯ ವ್ಯಾಪ್ತಿಯ ಕಟ್ಟಡಗಳು, ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಸೇರಿ ಇತರ ಕಟ್ಟಡಗಳಲ್ಲಿ ಕಡ್ಡಾಯವಾಗಿ ಎನ್ಬಿಸಿ ನಿಯಮ ಪ್ರಕಾರ ಅಗ್ನಿ ಸುರಕ್ಷತಾ ವ್ಯವಸ್ಥೆ ಇರಬೇಕು. ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯಿಂದ ಕಡ್ಡಾಯವಾಗಿ ‘ನಿರಾಕ್ಷೇಪಣಾ ಪ್ರಮಾಣಪತ್ರ’ ಪಡೆಯಬೇಕು. ಪ್ರತಿ 2 ವರ್ಷಕ್ಕೊಮ್ಮೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಪ್ರಯೋಗಾಲಯದ ಕಚೇರಿಯಿಂದಲೂ ನಿರಾಕ್ಷೇಪಣಾ ಪ್ರಮಾಣಪತ್ರವನ್ನೂ ಪಡೆದಿಲ್ಲ. ಜತೆಗೆ, ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ಬಹಳ ಮುಖ್ಯ. ಪ್ರತಿ ವರ್ಷ ಎತ್ತರದ ಕಟ್ಟಡಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದ ವೇಳೆ ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಜತೆಗೆ ಜೀವ ಹಾನಿಯು ಉಂಟಾಗುತ್ತಿರುತ್ತದೆ. ಹೀಗಾಗಿ, ಕಟ್ಟಡಗಳನ್ನು ಸ್ಮೋಕ್ ಡಿಟೆಕ್ಟರ್, ಸ್ಪ್ರಿಂಕ್ಲರ್,ಪ್ರಥಮ ಚಿಕಿತ್ಸಾ ಅಗ್ನಿಶಾಮಕ ವ್ಯವಸ್ಥೆ ಸೇರಿ ಇತರ ವ್ಯವಸ್ಥೆಗಳು ಇರಬೇಕು.