

ಗೋಕರ್ಣ: ವ್ಯವಸ್ಥಿತ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ತಡೆಯಲು ಸರ್ಕಾರ ಅಲ್ಲಲ್ಲಿ ಚೆಕ್‌ಪೋಸ್ಟ್ ಗಳನ್ನು ನಿರ್ಮಿಸಿ ಸ್ಥಿರ ಕಣ್ಗಾವಲು ಸಿಬ್ಬಂದಿಯನ್ನು ನೇಮಿಸಿದೆ.
ಆದರೆ ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ವ್ಯವಸ್ಥೆ ಇಲ್ಲದೆ, ಕರ್ತವ್ಯ ನಿರ್ವಹಣೆ ಕಷ್ಟಕರವಾಗಿದೆ.
ಇದು ಚುನಾವಣೆ ಅಕ್ರಮ ತಡೆಗಟ್ಟುವಲ್ಲಿಯೂ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಇದಕ್ಕೆ ಪ್ರಸ್ತುತ ಹಿರೇಗುತ್ತಿಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿನ ಚೆಕ್‌ಪೋಸ್ಟ್ ತಾಜಾ ಉದಾಹರಣೆ.
ಉತ್ತರ ಕನ್ನಡದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ಕಾರವಾರ ಮಾಜಾಳಿಯನ್ನು ಬಿಟ್ಟರೆ ಹಿರೇಗುತ್ತಿಯಲ್ಲಿ ಮಾತ್ರ ತನಿಖಾ ವ್ಯವಸ್ಥೆಯಿದೆ.
ಹೀಗಾಗಿ, ಹಿರೇಗುತ್ತಿಯಲ್ಲಿನ ಚೆಕ್‌ಪೋಸ್ಟ್‌ಗೆ ಗರಿಷ್ಠ ಮಹತ್ವ ಮತ್ತು ಹೆಚ್ಚಿನ ಕಣ್ಗಾವಲಿನ ಅಗತ್ಯವಿದೆ.
ಆದರೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ನಿರಂತರವಾಗಿ ಹೆದ್ದಾರಿಯ ಮೇಲೆ ಕಾವಲಾಗಿರಲು ಇನ್ನಿಲ್ಲದಂತೆ ಹೆಣಗಾಡಬೇಕಾದ ಪರಿಸ್ಥಿತಿಯಿದೆ.
ಹಿರೇಗುತ್ತಿ ತನಿಖಾ ಠಾಣೆ ಇರುವ ಬಗ್ಗೆ ಸಾಕಷ್ಟು ಮಾಹಿತಿ ಫಲಕಗಳಾಗಲಿ, ಈ ಕುರಿತಾದ ಕಚೇರಿಗಳಾಗಲಿ ಇಲ್ಲಿಲ್ಲ.
ಕೆಲವು ಬ್ಯಾರಿಕೇಡ್‌ಗಳನ್ನು ಮಾತ್ರ ಹಾಕಿಡಲಾಗಿದೆ.
ಹೀಗಾಗಿ ಅತ್ಯಂತ ವೇಗವಾಗಿ ಚತುಷ್ಪಥದಲ್ಲಿ ಸಂಚರಿಸುವ ವಾಹನಗಳನ್ನು ನಿಲ್ಲಿಸಲು ಪೊಲೀಸರು ಹೆದ್ದಾರಿ ನಡುವೆ ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲುತ್ತಿದ್ದಾರೆ.
ಇನ್ನು ರಾತ್ರಿ ಸಮಯದಲ್ಲಿ ಇಲ್ಲಿ ಕರ್ತವ್ಯ ನಿಭಾಯಿಸುವುದು ಅತ್ಯಂತ ಆತಂಕಕಾರಿಯಾಗಿದೆ.
ಯಾಕೆಂದರೆ ಈ ಚೆಕ್‌ಪೋಸ್ಟ್‌ಗೆ ಮತ್ತು ಅದರಾಚೀಚೆ ಯಾವುದೇ ಹೆಚ್ಚಿನ ಬೆಳಕಿನ ಏರ್ಪಾಟುಗಳಿಲ್ಲ.
ವಾಹನಗಳ ಉದ್ದನೆಯ ಸಾಲಿನಲ್ಲಿ ಅವುಗಳ ಹೆಡ್-ಲೈಟ್ ಮತ್ತು ಕೈ ಬ್ಯಾಟರಿಗಳ ಅಸ್ಪಷ್ಟ ಬೆಳಕಿನಲ್ಲಿ ತಪಾಸಣೆ ನಡೆಯುತ್ತಿರುತ್ತದೆ.
ಇಲ್ಲಿ ನಿರಂತರವಾಗಿ ಕಣ್ಗಾವಲು ನಡೆಸಲು ಮೂವರು ಪೊಲೀಸ್ ಮತ್ತು ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ.
ಆದರೆ, ಅವರ ವಿಶ್ರಾಂತಿಗಾಗಿ ಕೊಠಡಿಗಳಿಲ್ಲ. ಅರಣ್ಯ ಇಲಾಖೆಗೆ ಸೇರಿದ ಹಳೆಯದಾದ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಹೆಸರಿಗೊಂದು ಹಳೆಯ ಶೌಚಗೃಹ ಇದೆಯಾದರೂ ಅಲ್ಲಿ ನೀರಿಲ್ಲ.
ಕಚೇರಿಯಲ್ಲಿ ಸಲಕರಣೆಗಳೆ ತುಂಬಿರುವುದರಿಂದ ಸ್ಥಳಾಭಾವ ದಟ್ಟವಾಗಿದೆ.
ಇತ್ತೀಚೆಗೆ ತಾತ್ಕಾಲಿಕ ಟೆಂಟ್ ಒಂದನ್ನು ಹೆದ್ದಾರಿ ಮೇಲಿನ ಡಿವೈಡರ್ ಜಾಗದಲ್ಲಿ ಹಾಕಲಾಗಿದ್ದು, ಅದನ್ನು ಬಳಸುವುದು ಕಷ್ಟಕರ.
ಪೊಲೀಸರ ಅಂದಾಜಿನ ಪ್ರಕಾರ ಕನಿಷ್ಠ ಎರಡು ಸಾವಿರಕ್ಕೆ ಕಡಿಮೆ ಇರದಷ್ಟು ವಾಹನಗಳು ಈ ಹೆದ್ದಾರಿ ಮೇಲೆ 24 ಗಂಟೆಗಳಲ್ಲಿ ಸಾಗುತ್ತವೆ.
ಆದರೆ, ಇಷ್ಟೊಂದು ವಾಹನಗಳನ್ನು ನಿಲ್ಲಿಸಿ ತಪಾಸಿಸಲು ಚೆಕ್‌ಪೋಸ್ಟ್‌ನಲ್ಲಿನ ಸಿಬ್ಬಂದಿಯ ತೀವ್ರ ಕೊರತೆಯಿದೆ.
ಆದಾಗ್ಯೂ ಈಗಿರುವ ಸಿಬ್ಬಂದಿ ನಿರಂತರವಾಗಿ ಎಂಟು ತಾಸು ಅವಧಿಯಲ್ಲಿ 200 ವಾಹನಗಳನ್ನು ಅಂದರೆ, 24 ಗಂಟೆಗಳಲ್ಲಿ ಹೆಚ್ಚೆಂದರೆ 600 ವಾಹನಗಳನ್ನು ಮಾತ್ರ ತನಿಖೆ ಮಾಡಲು ಸಾಧ್ಯವಾಗಿದೆ.
ಕಾರಣ ಈ ಚೆಕ್‌ಪೋಸ್ಟ್‌ಗೆ ಇನ್ನೂ ಹೆಚ್ಚಿನ ಸಿಬ್ಬಂದಿಯ ಬೇಡಿಕೆಯಿದೆ.
ಹಿರೇಗುತ್ತಿ ಚತುಷ್ಪಥ ಮೇಲಿನ ಚೆಕ್‌ಪೋಸ್ಟ್ ಸಿಬ್ಬಂದಿ ಚುನಾವಣೆ ಕರ್ತವ್ಯ ನಿಭಾಯಿಸಲು ಹೆಣಗಾಡುತ್ತಿದ್ದಾರೆ. ದಕ್ಷ ನಿರ್ವಹಣೆಗೆ ಕೆಲವು ಮೂಲ ವ್ಯವಸ್ಥೆಗಳು ತ್ವರಿತವಾಗಿ ಆಗಬೇಕು. ಜತೆಗೆ ಹೆಚ್ಚಿನ ಸಿಬ್ಬಂದಿ ಮತ್ತು ಕೇಂದ್ರೀಯ ಸಶಸ್ತ್ರ ದಳವನ್ನು ಆಯೋಜಿಸಿದರೆ ಉತ್ತಮ.-ಪ್ರದೀಪ ನಾಯಕ, ಜಿಪಂ ಮಾಜಿ ಸದಸ್ಯ