

ಒಂದು ಗಂಡಿಗೆ ಒಂದು ಹೆಣ್ಣು ಇದ್ದೇ ಇರುತ್ತಾಳೆ ಎಂಬ ಮಾತಿದೆ. ಆದರೆ, ಪುರುಷರಿಗೆ ಅವಕಾಶವೇ ಇಲ್ಲದ ಮತ್ತು ಕೇವಲ ಮಹಿಳೆಯರೇ ಇರುವ ಒಂದು ಅಚ್ಚರಿಯ ಗ್ರಾಮ ಈ ಜಗತ್ತಿನಲ್ಲಿದೆ ಎಂದರೆ ನೀವು ನಂಬುತ್ತೀರಾ? ಹೌದು ನಂಬಲೇಬೇಕು. ಏಕೆಂದರೆ ಇಂಥದ್ದೊಂದು ಗ್ರಾಮ ಕೀನ್ಯಾ ದೇಶದಲ್ಲಿದೆ. ನಾವೀಗ ಈ ವಿಶೇಷ ಗ್ರಾಮದ ಬಗ್ಗೆ ತಿಳಿದುಕೊಳ್ಳೋಣ.
ಮಹಿಳೆಯರಿಲ್ಲದ ಜಗತ್ತು ಹೇಗಿರಲಿದೆ ಎಂಬುದನ್ನು ಕಲ್ಪಿಸಿಕೊಳ್ಳಿ ಎಂದು ಅನೇಕ ಚಲನಚಿತ್ರಗಳಲ್ಲಿ ಮತ್ತು ಕತೆಗಳಲ್ಲಿ ನಮ್ಮನ್ನು ಕೇಳಲಾಗಿದೆ. ಆದರೆ, ನಿಜವಾಗಿಯೂ ಕೀನ್ಯಾದ ಈ ಒಂದು ಗ್ರಾಮದಲ್ಲಿ ಪುರುಷರಿಗೆ ಅವಕಾಶವಿಲ್ಲ. ಆ ಗ್ರಾಮದ ಹೆಸರು ಉಮೋಜಾ. ಇಲ್ಲಿ ಮಹಿಳೆಯರು ಮತ್ತು ಮಕ್ಕಳು ಮಾತ್ರ ವಾಸ ಮಾಡುತ್ತಾರೆ. 30 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ವಿಚಿತ್ರ ಆಚರಣೆಯನ್ನು ಆರಂಭಿಸಲಾಯಿತು. ಈ ಗ್ರಾಮದಲ್ಲಿ ನೆಲೆಸಿರುವ ಮಹಿಳೆಯರೆಲ್ಲ ಸಂಬೂರ್ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಇದನ್ನು ಮಸಾಯಿ ಸಮುದಾಯದ ಭಾಗವೆಂದು ಪರಿಗಣಿಸಲಾಗಿದೆ.
ಈ ವಿಚಿತ್ರ ಆಚರಣೆ ಏಕೆ?
ಇಂಥದೊಂದು ವಿಚಿತ್ರ ಆಚರಣೆ ಏತಕ್ಕಾಗಿ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಉತ್ತರ ಏನೆಂದರೆ, ಈ ಹಿಂದೆ ಈ ಸಮುದಾಯದಲ್ಲಿ ಮಹಿಳೆಯರನ್ನು ಪುರುಷರ ಆಸ್ತಿ ಎಂದು ಪರಿಗಣಿಸಲಾಗಿತ್ತು. ಆದರೆ, ಮಹಿಳೆಯರಿಗೆ ಯಾವುದೇ ಪ್ರಮುಖ ಹಕ್ಕುಗಳು ಇರಲಿಲ್ಲ. ಮಹಿಳೆಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದರು. ಅನೇಕ ಮಹಿಳೆಯರು ಲೈಂಗಿಕ ದೌರ್ಜನ್ಯ, ವಯಸ್ಸಾದ ವ್ಯಕ್ತಿಯ ಜತೆ ಮದುವೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿತ್ಯವು ಎದುರಿಸುತ್ತಿದ್ದರು. ಇದಿಷ್ಟೇ ಅಲ್ಲದೆ, ಕೀನ್ಯಾ 1990ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಇದ್ದಾಗ ಬ್ರಿಟಿಷ್ ಸೈನಿಕರು ಅಲ್ಲಿನ ಮಹಿಳೆಯ ಮೇಲೆ ಅತ್ಯಾಚಾರಗಳನ್ನು ಎಸಗುತ್ತಿದ್ದರು. ಬಳಿಕ ಸಂತ್ರಸ್ತೆಯರನ್ನು ಅವರ ಪತಿಯಂದಿರು ಒಪ್ಪಿಕೊಳ್ಳುತ್ತಿರಲಿಲ್ಲ.
ಆ ಸಮಯದಲ್ಲಿ 1400 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ರೆಬೆಕ್ಕಾ ಲೊಲೊಸೊಲಿ ಎಂಬಾಕೆಯೂ ನಿರಂತರ ದೌರ್ಜನ್ಯಗಳಿಂದ ಅಕ್ಷರಶಃ ಬಳಲಿದ್ದರು. ಇದರಿಂದ ಹೇಗಾದರೂ ಬಚಾವ್ ಆಗಬೇಕೆಂದು ಲೊಲೊಸೊಲಿ ನೇತೃತ್ವದಲ್ಲಿ 15 ಮಹಿಳೆಯರು ಗುಂಪು ಸೇರಿ, ಮಹಿಳೆಯರಿಗಾಗಿ ಉಮೋಜಾ ಎಂಬ ಗ್ರಾಮವನ್ನು ನಿರ್ಮಿಸಿಕೊಂಡರು. ಇಂದಿಗೂ ಈ ಗ್ರಾಮದಲ್ಲಿ 40 ಕುಟುಂಬಗಳು ವಾಸವಿದೆ.
ಈ ಗ್ರಾಮದ ಮಹಿಳೆಯರ ಪ್ರಮುಖ ವೃತ್ತಿ ಯಾವುದೆಂದರೆ, ತಮ್ಮ ಸಂಪ್ರದಾಯದ ಮಣಿ ಮಾಲೆಗಳನ್ನು ತಯಾರು ಮಾಡಿ, ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ತಾವೇ ಗ್ರಾಮದ ಆಡಳಿತವನ್ನು ನಿರ್ವಹಣೆ ಮಾಡುತ್ತಾರೆ. ಅಂತಿಮವಾಗಿ ಕಾಡುವ ಪ್ರಶ್ನೆ ಏನೆಂದರೆ, ಪುರುಷರಿಗೆ ಅವಕಾಶ ಇಲ್ಲ ಅಂದಮೇಲೆ ಗ್ರಾಮದ ಮಹಿಳೆಯರು ಮಕ್ಕಳನ್ನು ಹೇಗೆ ಪಡೆಯುತ್ತಾರೆ? ಎಂಬುದು. ಹೇಗೆ ಅಂದರೆ, ಮಕ್ಕಳು ಬೇಕು ಅಂದಾಗ ಗ್ರಾಮವನ್ನು ತೊರೆದು ಬೇರೊಬ್ಬ ವ್ಯಕ್ತಿಯ ಜತೆ ಸಂಭೋಗ ನಡೆಸಿ ಗರ್ಭ ಧರಿಸುತ್ತಾರೆ. (ಏಜೆನ್ಸೀಸ್)