ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ಮನೆಗಳಲ್ಲೇ ವಿದ್ಯುತ್ ದೀಪ ಬೆಳಗಲ್ಲ!; ಕಚೇರಿಗಳಲ್ಲೂ ನಾಳೆ ರಾತ್ರಿ ಒಂದು ಗಂಟೆ ಎಲೆಕ್ಟ್ರಿಕ್​ ಲೈಟ್​ ಆಫ್!

Bescom
Published on

ಬೆಂಗಳೂರು: ನಾಳೆ ಎಂದರೆ ಶನಿವಾರ ರಾತ್ರಿ ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ವರ್ಗದವರ ಮನೆಗಳಲ್ಲೇ ವಿದ್ಯುತ್ ದೀಪ ಬೆಳಗುವುದಿಲ್ಲ. ರಾತ್ರಿ 9ರಿಂದ 10ರವರೆಗೆ ಬೆಸ್ಕಾಂ-ಅಧಿಕಾರಿ ಸಿಬ್ಬಂದಿ ಮಾತ್ರವಲ್ಲದೆ ಬೆಸ್ಕಾಂ ಕಚೇರಿಗಳಲ್ಲೂ ವಿದ್ಯುತ್ ದೀಪ ಆರಿರುತ್ತದೆ. ಇಂಥದ್ದೊಂದು ವಿದ್ಯಮಾನಕ್ಕೆ ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ವರ್ಗ ಈಗಾಗಲೇ ಮಾನಸಿಕವಾಗಿ ಸಜ್ಜಾಗಿದ್ದಾರೆ.

ಅಷ್ಟಕ್ಕೂ ಒಂದು ಅಭಿಯಾನದ ಸಲುವಾಗಿ ಇವೆಲ್ಲ ನಡೆಯಲಿವೆ. ಹವಾಮಾನ ಬದಲಾವಣೆ ವಿರುದ್ಧ ವಿಶ್ವದ ಅತಿದೊಡ್ಡ ಪರಿಸರ ಆಂದೋಲನ 'ಅರ್ಥ್ ಅವರ್' ಅಂಗವಾಗಿ ಶನಿವಾರ ರಾತ್ರಿ ಬೆಸ್ಕಾಂ ಕಚೇರಿಗಳಲ್ಲಿ 1 ಗಂಟೆ ವಿದ್ಯುತ್ ಬಳಕೆ ಸ್ಥಗಿತಗೊಳ್ಳಲಿದೆ.

ಜಾಗತಿಕ ತಾಪಮಾನ ಏರಿಕೆ ಸೇರಿ ಇನ್ನಿತರ ವಿಷಯಗಳ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಲವು ಅಭಿಯಾನ ಕೈಗೊಳ್ಳಲಾಗುತ್ತಿದೆ. ಅದರಂತೆ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ವಾತಾವರಣ ಬದಲಾವಣೆ ವಿರುದ್ಧದ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. ಈ ವರ್ಷ ಮಾ. 27ರಂದು ವರ್ಲ್ಡ್ ವೈಲ್ಡ್ ಫಂಡ್ ಸಂಸ್ಥೆ ‘ಅರ್ಥ್ ಅವರ್’ ಆಂದೋಲನ ಆಯೋಜಿಸಿದೆ.

ಅದರ ಪ್ರಕಾರ ರಾತ್ರಿ 8.30ರಿಂದ 9.30ರವರೆಗೆ ವಿದ್ಯುತ್ ದೀಪ ಬಳಕೆ ಸ್ಥಗಿತಗೊಳಿಸುವ ಮೂಲಕ ಅಭಿಯಾನ ಆಚರಿಸಲಾಗುತ್ತಿದೆ. ಈ ಕುರಿತಂತೆ ಬೆಸ್ಕಾಂನ ಎಲ್ಲ ಕಚೇರಿಗಳು ನಿಗದಿತ ಅವಧಿಯಲ್ಲಿ ವಿದ್ಯುತ್ ಬಳಕೆ ಮಾಡದಂತೆ ಸೂಚಿಸಲಾಗಿದೆ. ಅದರ ಜತೆಗೆ ಬೆಸ್ಕಾಂನ ಅಧಿಕಾರಿಗಳು, ಸಿಬ್ಬಂದಿ ಕೂಡ ತಮ್ಮ ಮನೆಗಳಲ್ಲೂ ವಿದ್ಯುತ್ ಬಳಕೆ ಮಾಡದಿರಲು ಮನವಿ ಮಾಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net