ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ಮಗಳ ಜತೆ ಮಗನನ್ನು ಕೊಂದು ನೇಣಿಗೆ ಶರಣಾದ ದಂಪತಿ..!

Farmer Family 1
Published on

ಮಂಚೇರಿಯಲ್​: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತನ ಕುಟುಂಬವೊಂದು ಅದರಿಂದ ಹೊರಬರಲಾರದೇ ಆತ್ಮಹತ್ಯೆ ಹಾದಿ ಹಿಡಿದಿರುವ ಆತಂಕಕಾರಿ ಘಟನೆ ತೆಲಂಗಾಣದ ಮಂಚೇರಿಯಲ್​ ಜಿಲ್ಲೆಯ ಕಾಸ್ಪೇಟ್​ ಮಂಡಲದ ಮಲ್ಕಪಲ್ಲಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೃತರನ್ನು ರೈತ ಜಂಜಿರಲಾ ರಮೇಶ್​ (50), ಪತ್ನಿ ಪದ್ಮಾ (45) ಅವರ ನವವಿವಾಹಿತೆ ಮಗಳು ಸೌಮ್ಯ (19) ಮತ್ತು ಅಕ್ಷಯ (17) ಎಂದು​ ಗುರುತಿಸಲಾಗಿದೆ. ಇವರು ಮಲ್ಕಪಲ್ಲಿ ನಿವಾಸಿಗಳು ಎಂದು ಕಾಸಿಪೇಟ್​ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್ ರಾಮುಲು ಮಾಹಿತಿ ನೀಡಿದರು.

ಸಾಲದ ಸುಳಿಯಿಂದ ಹೊರ ಬರಲು ಸಾಧ್ಯವಾಗದೇ ರಮೇಶ್​ ಮತ್ತು ಪದ್ಮ ಈ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆತ್ಮಹತ್ಯೆಗು ಮುನ್ನ ಮಗ ಮತ್ತು ಮಗಳನ್ನು ಕೊಲೆ ಮಾಡಿದ್ದಾರೆ. ಸೌಮ್ಯ ಮತ್ತು ಅಕ್ಷಯ್​ ಮೃತದೇಹ ನೆಲದ ಮೇಲೆ ಬಿದ್ದಿದ್ದರೆ, ದಂಪತಿ ದೇಹದ ಸೀಲಿಂಗ್​ನಲ್ಲಿ ನೇತಾಡುತ್ತಿತ್ತು. ರಮೇಶ್​ ಬರೆದಿದ್ದಾರೆ ಎನ್ನಲಾದ ಡೆತ್​ನೋಟ್​ ಸಹ ಪೊಲೀಸರಿಗೆ ಪತ್ತೆಯಾಗಿದೆ.

ಸಹೋದರ ಸಂದೀಪ್​ ಮತ್ತು ಮಹೇಶ್​ ದಯವಿಟ್ಟು ನಮ್ಮನ್ನು ಕ್ಷಮಿಸಿ. ನಮ್ಮನ್ನು ಶಪಿಸಬೇಡಿ. ಹತ್ತಿ ಬೆಳೆಯಲ್ಲಿ ನನಗೆ ಯಾವುದೇ ಲಾಭ ದೊರೆಯಲಿಲ್ಲ. ಸುಮಾರು 8 ಲಕ್ಷ ರೂ. ಸಾಲವನ್ನು ನನ್ನಿಂದ ತೀರಿಸಲು ಸಾಧ್ಯವಾಗಲಿಲ್ಲ. ಸಾಲವನ್ನು ತೀರಿಸಲು ನನ್ನ ಬಳಿ ಯಾವುದೇ ಆಸ್ತಿಯು ಸಹ ಇಲ್ಲ. ಸಾಲದಿಂದಾಗಿ ನಾವು ಬಲವಂತವಾಗಿ ಆತ್ಮಹತ್ಯೆ ಸುಳಿಗೆ ಸಿಲುಕುತ್ತಿದ್ದೇವೆ. ನಮ್ಮ ಬಳಿ ಯಾವುದಾದರೂ ಆಸ್ತಿ ಇದ್ದಿದ್ದರೆ ನಾವು ಬದುಕಿರುತ್ತಿದ್ದೆವು ಎಂದು ಬರೆದಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಮೃತದೇಹಗಳನ್ನು ಮಂಚೇರಿಯಲ್​ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net