HMPV ಬಗ್ಗೆ ಭಯಪಡುವ ಅಗತ್ಯವಿಲ್ಲ; ಮುನ್ನೆಚ್ಚರಿಕೆ ಕುರಿತು ಕೇಂದ್ರ ಆರೋಗ್ಯ ಇಲಾಖೆ ಹೇಳಿದ್ದಿಷ್ಟು

HMPV
Published on

ನವದೆಹಲಿ: ಕೋವಿಡ್​ ಮೂಲಕ ಇಡೀ ಜಗತ್ತಿನಲ್ಲಿ ವಿನಾಶವನ್ನು ಉಂಟು ಮಾಡಿದ್ದ ಚೀನಾದಲ್ಲಿ ಇದೀಗ ಹ್ಯೂಮನ್​ ಮೆಟಾಪ್ನ್ಯೂಮೋವೈರಸ್ (HMPV) ಎಂಬ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ವಿಶ್ವದಾದ್ಯಂತ ಮತ್ತೊಮ್ಮೆ ಹೆಲ್ತ್​​ ಎಮರ್ಜೆನ್ಸಿ ಸೃಷ್ಟಿಯಾಗಲಿದೆಯಾ ಎಂಬ ಆತಂಕ ಕಾಡಲು ಶುರುವಾಗಿದೆ. ಚೀನಾದಲ್ಲಿ ಹರಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಈ ಕುರಿತು ಮಾತನಾಡಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಅತುಲ್ ಗೋಯೆಲ್  ಡಾ. ಅತುಲ್ ಗೋಯೆಲ್, ಈ ವೈರಸ್‌ (Virus) ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಉಸಿರಾಟದ ಸೋಂಕುಗಳ ವಿರುದ್ಧ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು. ಇದಲ್ಲದೆ ನಾವು ಡೇಟಾವನ್ನು ವಿಶ್ಲೇಷಿಸಿದ್ದೇವೆ.

ನಾವು ದೇಶದಲ್ಲಿ ಉಸಿರಾಟಕ್ಕೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೇಸ್‌ ದಾಖಲಾದ ಬಗ್ಗೆ ವರದಿಯಾಗಿಲ್ಲ. ಯಾವುದೇ ನಿರ್ದಿಷ್ಟ ಆ್ಯಂಟಿವೈರಲ್ ಚಿಕಿತ್ಸೆ ಇಲ್ಲ, ಆದ್ದರಿಂದ ಅದರ ಹರಡುವಿಕೆಯನ್ನು ನಿಯಂತ್ರಿಸಲು ತಡೆಗಟ್ಟುವಿಕೆ ಮುಖ್ಯವಾಗಿದೆ.

ಚೀನಾದಲ್ಲಿ HMPV ಏಕಾಏಕಿ ಹರಡಿರುವ ಬಗ್ಗೆ ಸುದ್ದಿಗಳಿವೆ. ಇದು ಬೇರೆ ವೈರಸ್‌ನಂತೆ ಸಾಮಾನ್ಯ ಶೀತವನ್ನು ಉಂಟುಮಾಡುತ್ತದೆ. ವಯಸ್ಸಾದವರು ಮತ್ತು ಚಿಕ್ಕವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳು ಹೆಚ್ಚಾಗುತ್ತವೆ, ಇದಕ್ಕಾಗಿ ಸಾಮಾನ್ಯವಾಗಿ ನಮ್ಮ ಆಸ್ಪತ್ರೆಗಳು ಸಜ್ಜಾಗಿರುತ್ತವೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಅತುಲ್ ಗೋಯೆಲ್  ಡಾ. ಅತುಲ್ ಗೋಯೆಲ್ ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net