ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ!

Nityanandana Kailasa was the representative of the country who spoke at the United Nations
Published on

ಲಾಸ್​​ ಏಂಜಲೀಸ್​​: ಜಿನಿವಾ ನಗರದಲ್ಲಿ ಇತ್ತೀಚೆಗೆ ನಡೆದಿದ್ದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನವೊಂದರಲ್ಲಿ ಸ್ವಯಂ ಘೋಷಿತ ದೇವ ಮಾನವ ಸ್ವಾಮಿ ನಿತ್ಯಾನಂದನ ಕೈಲಾಸ ರಾಷ್ಟ್ರದ ಪ್ರತಿನಿಧಿಗಳು ಭಾಗವಹಿಸಿ ಮಾತನಾಡಿದ್ದಾರೆ.

ಫೆಬ್ರವರಿ 23ರಂದು ನಡೆದಿದ್ದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನವನ್ನು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸುವ ಸಲುವಾಗಿ ಈ ಸಮ್ಮೇಳನವನ್ನು ಕರೆಯಲಾಗಿತ್ತು. ಅಮೆರಿಕ, ಯುನೈಟೆಡ್ ಕಿಂಗ್ ಡಮ್, ಫ್ರಾನ್ಸ್, ಸ್ಲೊವೇನಿಯಾ ಮುಂತಾದ ರಾಷ್ಟ್ರಗಳಲ್ಲಿ ಕೈಲಾಸ ಶಾಖೆಗಳನ್ನು ಮುನ್ನಡೆಸುತ್ತಿರುವ ನಿತ್ಯಾನಂದ ಶಿಷ್ಯೆಯರು ಭಾಗವಹಿಸಿದ್ದರು.

ಸಭೆಯಲ್ಲಿ ನಿತ್ಯಾನಂದ ಶಿಷ್ಯೆಯರು ಎಲ್ಲರೂ ಮಾತನಾಡಿ, ನಿತ್ಯಾನಂದ ತನ್ನ ಜನ್ಮಸ್ಥಳವಾದ ಭಾರತ ದೇಶದಿಂದ ಹಿಂಸೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಇತರ ಪ್ರತಿನಿಧಿಗಳು ಮಾತನಾಡಿ, ನಾನಾ ದೇಶಗಳಲ್ಲಿ ಮಹಿಳೆಯರು ಅನುಭವಿಸುತ್ತಿರುವ ಹಿಂಸೆಗಳು, ಪುರುಷ ಪ್ರಧಾನ ಸಮಾಜಗಳಲ್ಲಿ ಒಳಗಾಗುತ್ತಿರುವ ಅಪಮಾನಗಳ ಬಗ್ಗೆ ಮಾತನಾಡಿದರು. ಜಗತ್ತಿನ ಇಂದಿನ ಮಹಿಳೆಯಲ್ಲಿ ಶೇ. 82ರಷ್ಟು ಮಹಿಳೆಯರು ದೌರ್ಜನ್ಯಕ್ಕೆ ಪದೇ ಪದೇ ಒಳಗಾಗುತ್ತಿದ್ದಾರೆ. ಪುರುಷ ಪ್ರಧಾನ ಸ್ಥಿತಿಗತಿಗಳನ್ನು ಪ್ರಶ್ನಿಸಿದ್ದಕ್ಕಾಗಿ ಶೇ. 42ರಷ್ಟು ಮಹಿಳೆಯರು, ಅತ್ಯಾಚಾರ ಸೇರಿದಂತೆ ಅನೇಕ ಬೆದರಿಕೆಗಳಿಗೆ ಒಳಗಾಗುತ್ತಿದ್ದಾರೆಂದು ಹೇಳಿದ್ದಾರೆ.

ಈ ಮಹಾಸಭೆಯಲ್ಲಿ ವಿಶ್ವಸಂಸ್ಥೆಯಲ್ಲಿ ಕೈಲಾಸ ರಾಷ್ಟ್ರದ ಶಾಶ್ವತ ರಾಯಭಾರಿಯಾಗಿರುವ ಮಾತೆ ವಿಜಯಪ್ರಿಯ ನಿತ್ಯಾನಂದ, ಲಾಸ್ ಏಂಜಲೀಸ್ ನ ಕೈಲಾಸ ಶಾಖೆಯ ಮುಖ್ಯಸ್ಥೆಯಾದ ಮಾತೆ ಮುಕ್ತಿಕಾ ಆನಂದ, ಸೇಂಟ್ ಲೂಯಿಸ್ ನ ಕೈಲಾಸ ಶಾಖೆಯ ಮಾತೆ ಸೋನಾ ಕಾಮತ್, ಯುನೈಟೆಡ್ ಕಿಂಗ್ ಡಮ್ ನ ಕೈಲಾಸ ಶಾಖೆಯ ಮುಖ್ಯಸ್ಥೆ ಮಾತೆ ನಿತ್ಯ ಆತ್ಮದಾಯಕಿ, ಫ್ರಾನ್ಸ್ ನಲ್ಲಿರುವ ಕೈಲಾಸ ಶಾಖೆಯ ಮುಖ್ಯಸ್ಥೆ ಮಾತೆ ನಿತ್ಯ ವೆಂಕಟೇಶಾನಂದ ಹಾಗೂ ಸ್ಲೊವೇನಿಯ ಕೈಲಾಸ ಶಾಖೆಯ ಮುಖ್ಯಸ್ಥೆ ಮಾತೆ ಪ್ರಿಯಾ ಪ್ರೇಮ ಭಾಗವಹಿಸಿದ್ದರೆಂದು ಸಾಮಾಜಿಕ ಜಾಲತಾಣವಾದ ಟ್ವಿಟರ್​​ನಲ್ಲಿ ನಿತ್ಯಾನಂದ ಖಾತ್ರಿ ಪಡಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net