Chirag Paswan | ಪ್ರಧಾನಿ ಮೋದಿಗೋಸ್ಕರ ಏನು ಬೇಕಾದರೂ ಮಾಡುತ್ತೇನೆ ; ಸಿಎಂ ನಿತೀಶ್​ ಕುಮಾರ್​​ ಎನ್​ಡಿಎ ಮೈತ್ರಿಕೂಟದ ಬಲಾಡ್ಯ ನಾಯಕ ಎಂದ ಕೇಂದ್ರ ಸಚಿವ ಚಿರಾಗ್​ ಪಾಸ್ವಾನ್​​!

Chirag Paswan
Published on

Chirag Paswan: ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎಯ ಕೂಟದ ಬಲಿಷ್ಠ ನಾಯಕರಾಗಿದ್ದು, ಅವರೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದು ಕೇಂದ್ರ ಸಚಿವ ಚಿರಾಗ್​ ಪಾಸ್ವಾನ್ ಹೇಳಿದ್ದಾರೆ.

ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಪಾಸ್ವಾನ್​​, ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆಗಳನ್ನು ನೀಡಲಾಗುವುದು ಮತ್ತು ನಿಲುವುಗಳನ್ನು ತೆಗೆದುಕೊಳ್ಳಲಾಗುತ್ತದೆ, ಅಂತಿಮವಾಗಿ ವಿಧಾನಸಭಾ ಚುನಾವಣೆ ಗೆಲ್ಲುವುದೇ ನಮ್ಮ ಆದ್ಯತೆಯಾಗಿರಬೇಕು ಎಂದರು.

ಸ್ಪರ್ಧೆ ಬಗ್ಗೆ ಹೇಳಿದ್ದೇನು..?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನೀವು ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಸ್ವಾನ್​, ಈ ವಿಷಯವಾಗಿ ಇನ್ನೂ ಚರ್ಚೆಗಳು ನಡೆಯುತ್ತಿದ್ದು, ಖಂಡಿತವಾಗಿಯೂ ಸ್ಪರ್ಧಿಸುವ ಬಯಕೆ ಇದೆ, ಆದರೆ ಮೈತ್ರಿಕೂಟದ ಗೆಲುವು ನಮ್ಮ ಮೊದಲ ಆದ್ಯತೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಗಾಗಿ ಯಾವ ನಿರ್ಧಾರವನ್ನಾದರೂ ತೆಗೆದುಕೊಳ್ಳುತ್ತೇನೆ ಪ್ರಸ್ತುತವಾಗಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ನಮಗಿರುವ ಸಾರ್ವಜನಿಕ ಮಹತ್ವಾಕಾಂಕ್ಷೆಗಳು ಎನ್‌ಡಿಎ ಕೂಟದಲ್ಲಿ ಒಡಕನ್ನು ಸೃಷ್ಟಿಸುವ ಪ್ರಯತ್ನವಾಗಬಾರದು ಎಂದರು.

ಗೊಂದಲವಿಲ್ಲ..

ಈ ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದು, ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಟಿಕೆಟ್​​ ಹಂಚಿಕೆ ವಿಷಯವಾಗಿ ಎನ್‌ಡಿಎಯೊಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಮ್ಮ ಮೈತ್ರಿಕೂಟ 243 ಸ್ಥಾನಗಳಲ್ಲಿ ಕನಿಷ್ಟ 225 ಕ್ಕೂ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಸೇರಿದಂತೆ ಇತರ ಸಣ್ಣ ಪುಟ್ಟ ಪಕ್ಷಗಳು 100 ಸ್ಥಾನಗಳಗೆ ಬೇಡಿಕೆ ಇಟ್ಟಿದ್ದು, ಇದರ ಹೊರತಾಗಿಯೂ, ಈ ಬಾರಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಅಸಮಧಾನ ಇಲ್ಲ ಎಂದು ಪಾಸ್ವಾನ್ ಸ್ಪಷ್ಟಪಡಿಸಿದರು.

ಜಂಗಲ್ ರಾಜ್ ಮತ್ತು ಒಳನುಸುಳುವಿಕೆ ಬಗ್ಗೆ ಪಾಸ್ವಾನ್​​ ಮಾತು

ಹಿಂದಿನ ಎನ್​ಡಿಎ ಮೈತ್ರಿಕೂಟದ ಪ್ರಚಾರದ ವಾಕ್ಯವನ್ನು ಪುನರುಚ್ಛರಿಸಿದ ಪಾಸ್ವಾನ್​​, ಆರ್‌ಜೆಡಿ ಮತ್ತೆ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಅಪರಾಧ ಮತ್ತು ಭ್ರಷ್ಟಾಚಾರ ತುಂಬಿ ತುಳುಕುತ್ತದೆ ಮತ್ತೆ ಜಂಗಲ್ ರಾಜ್ ಆಳ್ವಿಕೆ ಜಾರಿ ಬರುತ್ತದೆ ಎಂದರು. ಅಕ್ರಮ ಒಳನುಸುಳುವಿಕೆ ಪ್ರಮುಖ ವಿಷಯವೆಂದ ಪಾಸ್ವಾನ್​​​, ಒಳನುಸುಳುವವರು ರಾಜ್ಯದ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

2020 ರ ವಿಧಾನಸಭಾ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಅವರ ಎಲ್​​ಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿ 137 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದು ನಿತೀಶ್ ಕುಮಾರರ ಆರ್​ಜೆಡಿಗೆ ದೊಡ್ಡ ಹೊಡೆತ ನೀಡಿತು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net