

ಬೆಳ್ತಂಗಡಿ: ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಿತದರದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುತ್ತಿರುವ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸೇವೆ ಶ್ಲಾಘನೀಯ ಎಂದು ಕೆನರಾ ಬ್ಯಾಂಕ್ ಕೇಂದ್ರ ಕಚೇರಿಯ ಎಫ್.ಐ ವಿಂಗ್ ಜನರಲ್ ಮ್ಯಾನೇಜರ್ ಎಂ.ಭಾಸ್ಕರ ಚಕ್ರವರ್ತಿ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದರು.
ಕಳೆದ ಬಾರಿ ಭೇಟಿ ನೀಡಿದಾಗ ಇದ್ದ ತಜ್ಞ ವೈದ್ಯರ ಸಂಖ್ಯೆ, ಸಿಬ್ಬಂದಿ ಸಂಖ್ಯೆ, ರೋಗಿಗಳ ಸಂಖ್ಯೆ ಈ ಬಾರಿ ಹೆಚ್ಚಾಗಿದೆ. ಆಸ್ಪತ್ರೆ ಮತ್ತು ಆಸ್ಪತ್ರೆಯ ಸೇವೆ ಕೂಡ ವಿಸ್ತಾರಗೊಳ್ಳುತ್ತಿದೆ ಎಂದರು.
ಎಂ.ಭಾಸ್ಕರ ಚಕ್ರವರ್ತಿ ಅವರನ್ನು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್ ಪಿ. ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್ ಬರಮಾಡಿಕೊಂಡರು.
ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಮಾತನಾಡಿ, ಆಸ್ಪತ್ರೆಗೆ ಕೆನರಾ ಬ್ಯಾಂಕ್‌ನಿಂದ ಕಳೆದ ವರ್ಷ ನೀಡಲ್ಪಟ್ಟ 10 ಲಕ್ಷ ರೂ.ಗಳ ವಿಶೇಷ ದೇಣಿಗೆಯಲ್ಲಿ ಕಾರ್ಡಿಯಾಕ್ ಮೋನಿಟರ್ ಮತ್ತು ಸಿರಿಂಜ್ ಪಂಪು ಖರೀದಿಸಿದ್ದು, ಇದು ರೋಗಿಗಳ ತುರ್ತುಚಿಕಿತ್ಸೆಗೆ ಬಹಳ ಸಹಕಾರಿಯಾಗಿದೆ. ಇಲ್ಲಿ ನುರಿತ ತಜ್ಞ ವೈದ್ಯರ ತಂಡವಿದ್ದು, ಹಲವಾರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮಿತದರದಲ್ಲಿ ನಡೆಸಲಾಗುತ್ತಿದೆ. ಮೊಣಕಾಲು, ಸೊಂಟದ ಕೀಲುಗಳ ಬದಲಿ ಶಸ್ತ್ರಚಿಕಿತ್ಸೆಗಳಂತಹ ದುಬಾರಿ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮಾಡಲಾಗುತ್ತಿದೆ. ಶೀಘ್ರದಲ್ಲಿ ಎಂ.ಆರ್.ಐ ಸೇವೆ ದೊರೆಯಲಿದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್ ಪಿ. ಮತ್ತು ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.