ಕೆಎಸ್​ಸಿಎ ಟೂರ್ನಿಯಲ್ಲಿ ರನ್​ಮಳೆ ಹರಿಸಿದ 13ರ ಪೋರ ನಿತೀಶ್​ ಆರ್ಯಾ!

arya web
Published on

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್​ಸಿಎ) 2023-24ರ ಸಾಲಿನಲ್ಲಿ ಆಯೋಜಿಸಿರುವ ವಿವಿಧ ಟೂರ್ನಿಗಳಲ್ಲಿ 13 ವರ್ಷದ ಬ್ಯಾಟರ್​ ನಿತೀಶ್​ ಆರ್ಯಾ 1,400ಕ್ಕೂ ಅಧಿಕ ರನ್​ ಸಿಡಿಸುವ ಮೂಲಕ ಗಮನಸೆಳೆದಿದ್ದಾನೆ.

ವಿರಾಟ್​ ಕೊಹ್ಲಿ ಅವರ ಕಟ್ಟಾ ಅಭಿಮಾನಿಯಾಗಿರುವ ನಿತೀಶ್​ ಆರ್ಯಾ ಮುಂದೊಂದು ದಿನ ಮೂರೂ ಕ್ರಿಕೆಟ್​ ಪ್ರಕಾರದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಹೊಂದಿದ್ದಾನೆ. ಬಲಗೈ ಆರಂಭಿಕ ಬ್ಯಾಟರ್​ ಆಗಿರುವ ನಿತೀಶ್​, 3ನೇ ವಯಸ್ಸಿನಲ್ಲೇ ಕ್ರಿಕೆಟ್​ ಆಡಲಾರಂಭಿಸಿದ್ದ. ರಾಜಾಜಿನಗರ ಕ್ರಿಕೆಟರ್ಸ್​ ಮತ್ತು ಶಾಲಾ ತಂಡ ಮ್ಯಾಕ್ಸ್​ ಮುಲ್ಲರ್​ ಹೈಸ್ಕೂಲ್​ (ಬಸವೇಶ್ವರನಗರ) ಪರ ಆಡುವ ನಿತೀಶ್​ ಆರ್ಯಾ, 7ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

ಕೆಎಸ್​ಸಿಎ ಕಪ್​ 16 ವಯೋಮಿತಿಯ ಟೂರ್ನಿಯಲ್ಲಿ 3 ಶತಕ ಮತ್ತು 3 ಅರ್ಧಶತಕಗಳ ಸಹಿತ ಸರ್ವಾಧಿಕ 565 ರನ್​ ಸಿಡಿಸಿರುವ ನಿತೀಶ್​, ಕೆಎಸ್​ಸಿಎಯ 14 ವಯೋಮಿತಿ ಟೂರ್ನಿಯಲ್ಲೂ ಸ್ಥಿರ ನಿರ್ವಹಣೆ ಪ್ರದರ್ಶಿಸಿದ್ದಾನೆ.

ಕೆಎಸ್​ಸಿಎ 4ನೇ ಡಿವಿಷನ್​ ಲೀಗ್​ನಲ್ಲೂ ವಿಕ್ಟರಿ ಕ್ರಿಕೆಟ್​ ಕ್ಲಬ್​ ಪರ ಆಡುವ ನಿತೀಶ್​, ಇದುವರೆಗೆ 4 ಪಂದ್ಯಗಳಲ್ಲಿ ಒಂದು ಅರ್ಧಶತಕ ಬಾರಿಸಿದ್ದಾನೆ. ನಿತೀಶ್​ ದಿನವೊಂದರಲ್ಲಿ 6-7 ಗಂಟೆಗಳ ಕಾಲ ಅಭ್ಯಾಸ ನಡೆಸುವ ಮೂಲಕ ಸಣ್ಣ ವಯಸ್ಸಿನಲ್ಲೇ ಅಪಾರ ಕ್ರಿಕೆಟ್​ ಪ್ರೀತಿ ಮತ್ತು ಬದ್ಧತೆಯನ್ನು ತೋರುತ್ತಿದ್ದಾನೆ ಎಂದು ರಾಜಾಜಿನಗರ ಕ್ರಿಕೆಟರ್ಸ್​ ಕೊಚ್​ ವಿನಯ್​ ಕುಮಾರ್​ ಎನ್​ಪಿ ಹೇಳಿದ್ದಾರೆ.

ಕ್ರಿಕೆಟ್​ ಆಟದ ನಡುವೆ ಶೈಕ್ಷಣಿಕವಾಗಿಯೂ ಹಿಂದುಳಿಯದ ನಿತೀಶ್​, ಶೇ.80&90 ಅಂಕಗಳಿಕೆಯೊಂದಿಗೆ ಕ್ರೀಡೆ&ಶಿಕ್ಷಣದ ನಡುವೆ ಸಮತೋಲನವನ್ನು ಸಾಧಿಸಿರುವುದು ಗಮನಾರ್ಹವೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net