

ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ವಾಹನ ದಟ್ಟಣೆ ತಗ್ಗಿಸುವ ಉಪ ನಗರ ವರ್ತುಲ ರಸ್ತೆ ಯೋಜನೆ (ಎಸ್‌ಟಿಆರ್‌ಆರ್) ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಸಚಿವ ನಿತಿನ್ ಗಡ್ಕರಿ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾದ ಕುಮಾರಸ್ವಾಮಿ (HD Kumaraswamy) ಅವರು ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಕುಮಾರಸ್ವಾಮಿ ಅವರ ಮನವಿಗೆ ಕೂಡಲೇ ಸ್ಪಂದಿಸಿದ ಗಡ್ಕರಿ ಅವರು; ಆದಷ್ಟು ಬೇಗ ಯೋಜನೆಯ ಪ್ರಸ್ತಾವನೆಯನ್ನು 'ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿ' (Public Private Partnership Appraisal Committee - PPPAC) ಮುಂದೆ ಮಂಡಿಸಿ ತ್ವರಿತವಾಗಿ ಅನುಷ್ಠಾನಗೊಳಿಸುವುಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.
ಎಂಟು ವರ್ಷಗಳಿಂದ ಬಾಕಿ ಇದ್ದ ಭೂಸ್ವಾಧೀನ ಪರಿಹಾರದ ಹಣವನ್ನು ಕೂಡಲೇ ರೈತರಿಗೆ ಪಾವತಿ ಮಾಡಲು ಸಚಿವ ಗಡ್ಕರಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಮನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಅನುಕೂಲವಾಗಲಿದೆ.
ಈ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಸುಮಾರು 135 ಕಿ.ಮೀ. ದೂರ ಹಾದು ಹೋಗಲಿದ್ದು, ಯೋಜನೆಯ ಸುಮಾರು ₹4,750 ಕೋಟಿ ವೆಚ್ಚದಲ್ಲಿ ಕಾರ್ಯಗತ ಆಗುತ್ತಿದೆ. 4 ರಿಂದ 6 ಪಥ ಹೊಂದಿರುವ ಸಂಪೂರ್ಣ ನಿಯಂತ್ರಿತ ಪ್ರವೇಶ ವ್ಯವಸ್ಥೆಯನ್ನು ಹೊಂದಿರುವ ಈ ಹೆದ್ದಾರಿಯು ಯಾವುದೇ ಅಡೆತಡೆಗಳಿಲ್ಲದೆ ಸಂಚಾರ ಸೌಲಭ್ಯ ಕಲ್ಪಿಸಲಿದೆ. ಬೆಂಗಳೂರು ಸುತ್ತಲಿನ ಉಪ ನಗರಗಳ ಮೂಲಕ ರಸ್ತೆ ಹಾದು ಹೋಗಲಿದೆ. ಇದು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಕೈಗಾರಿಕಾಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಇದೆಲ್ಲಾ ಸಾಧ್ಯವಾಗುತ್ತಿದೆ ಹಾಗೂ ರಾಜ್ಯದ ಅಭಿವೃದ್ಧಿ ಬಗ್ಗೆ ನಿತಿನ್ ಗಡ್ಕರಿ ಅವರು ತೋರಿದ ಬದ್ಧತೆ ಅಭಿನಂದನಾರ್ಹ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾಸ್ವಾಮಿ (HD Kumaraswamy) ಅವರು ಹೇಳಿದ್ದಾರೆ.