ಬಲ್ಕಂಪೇಟ್‌ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ನೀತಾ ಅಂಬಾನಿ! Nita Ambani

Nita Ambani
Published on

Nita Ambani : ಏಷ್ಯಾದ ಅತಿದೊಡ್ಡ ಬಿಲಿಯನೇರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್​ ಮುಕೇಶ್ ಅಂಬಾನಿ ( Mukesh Ambani ) ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಅಂಬಾನಿ ಕುಟುಂಬದಲ್ಲಿ ಸಂಪತ್ತಿಗೆ ಯಾವುದೇ ಕೊರತೆ ಇಲ್ಲ. ದೇಶದ ಜಿಡಿಪಿಯ ಶೇ. 10 ರಷ್ಟು ಆಸ್ತಿ ಅಂಬಾನಿ ಕುಟುಂಬದವರ ಬಳಿಯಿದೆ. ಈ ಕುಟುಂಬ ಏನೇ ಮಾಡಿದರೂ ಅಲ್ಲೊಂದು ಅದ್ಧೂರಿತನ ಇದ್ದೇ ಇರುತ್ತದೆ. ಅದಕ್ಕೆ ತಾಜಾ ಉದಾಹರಣೆ ಕಳೆದ ವರ್ಷ ನಡೆದ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್​ ಅಂಬಾನಿ ಮದುವೆ.

ರಿಲಯನ್ಸ್ ಫೌಂಡೇಶನ್‌ ಸಂಸ್ಥಾಪಕಿ ಶ್ರೀಮತಿ ನೀತಾ ಅಂಬಾನಿ ( Nita Ambani ) ತಮ್ಮ ಐಷಾರಾಮಿ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಅಲ್ಲದೆ, ಲೋಕೋಪಕಾರಿ ಕಾರ್ಯಗಳಿಗೆ ಹೆಸರುವಾಸಿಯಾಗಿರುವ ನೀತಾ ಅಂಬಾನಿ ಅವರು ದೇವಾಲಯವೊಂದಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ತೆಲಂಗಾಣದ ಬಲ್ಕಂಪೇಟ್‌ನಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಈ ದೇಣಿಗೆ ನೀಡಲಾಗಿದೆ.

ನೀತಾ ಅಂಬಾನಿ ಅವರ ತಾಯಿ ಪೂರ್ಣಿಮಾ ದಲಾಲ್ ಮತ್ತು ಸಹೋದರಿ ಮಮತಾ ದಲಾಲ್ ಏಪ್ರಿಲ್ 23 ರಂದು ಈ ಐತಿಹಾಸಿಕ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಭೇಟಿಯ ಸಮಯದಲ್ಲಿ, ಪೂರ್ಣಿಮಾ ದಲಾಲ್ ಮತ್ತು ಅವರ ಸಹೋದರಿ ಮಮತಾ ದಲಾಲ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ದೇವಾಲಯಕ್ಕೆ ಸಂಬಂಧಿಸಿದ ದಂತಕಥೆಗಳ ಬಗ್ಗೆ ಅವರಿಗೆ ತಿಳಿಸಿದರು. ದೇವಾಲಯದ ನವೀಕರಣಕ್ಕಾಗಿ ಹಣವನ್ನು ಸಹ ವಿನಂತಿಸಿದರು. ಇದರ ಬೆನ್ನಲ್ಲೇ, ನೀತಾ ಅಂಬಾನಿ ಅವರು ಬಲ್ಕಂಪೇಟ್ ಯೆಲ್ಲಮ್ಮ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಲು ನಿರ್ಧರಿಸಿದರು. ಬುಧವಾರ ದೇವಸ್ಥಾನದ ಬ್ಯಾಂಕ್ ಖಾತೆಗೆ ಮೊತ್ತ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀತಾ ಅಂಬಾನಿ ಅವರು ದೇಣಿಗೆ ನೀಡಿದ ಮೊತ್ತವನ್ನು ಸ್ಥಿರ ಠೇವಣಿಯಾಗಿ ಇಡಲಾಗಿದ್ದು, ಅದರಿಂದ ಬರುವ ಬಡ್ಡಿಯನ್ನು ದೈನಂದಿನ ಆಹಾರಕ್ಕಾಗಿ ಬಳಸಲಾಗುವುದು ಎಂದು ದೇವಸ್ಥಾನದ ಉಸ್ತುವಾರಿ ಇಒ ಮಹೇಂದರ್ ಗೌಡ್ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net