ಯಾರೀ ನಿಖಿಲ್​ ಸೋಸಲೆ? ಆರ್​ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥನಿಗೆ ಖಾಕಿ ಡ್ರಿಲ್​! ಫ್ರಾಂಚೈಸಿಗೆ ತಪ್ಪದ ಸಂಕಷ್ಟ | Nikhil Sosale

ವಿಜಯವಾಣಿ (28)
Published on

Nikhil Sosale: ಜೂ.04ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಯುವ ಅಭಿಮಾನಿಗಳು ಸಾವಿಗೀಡಾದರು. ಚೊಚ್ಚಲ ಐಪಿಎಲ್​ ಟ್ರೋಫಿ ಎತ್ತಿಹಿಡಿದ ಆರ್​ಸಿಬಿ ಗೆಲುವನ್ನು ಸಂಭ್ರಮಿಸಲು ಸ್ಟೇಡಿಯಂಗೆ ಧಾವಿಸಿದ ಅಭಿಮಾನಿಗಳು, ನೂಕುನುಗ್ಗಲು ಉಂಟಾದ ಹಿನ್ನೆಲೆ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.

ಆರ್​ಸಿಬಿಗೆ ತಪ್ಪದ ಸಂಕಷ್ಟ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ತಂಡದ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆನ್ನಲ್ಲೇ ಮುಂಬೈಗೆ ಹಾರಲು ಸಂಚು ಹಾಕಿದ್ದ ನಿಖಿಲ್​ರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಇದಲ್ಲದೆ, ವಿಜಯೋತ್ಸವ ಕಾರ್ಯಕ್ರಮದ ಆಯೋಜಕರಾದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ಮೂವರು ಉದ್ಯೋಗಿಗಳಾದ ಕಿರಣ್, ಸುಮಂತ್ ಮತ್ತು ಸುನಿಲ್ ಮ್ಯಾಥ್ಯೂರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ನಾಲ್ವರನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

ಕಾರ್ಯಕ್ರಮ ಆಯೋಜನೆಯಲ್ಲಿ ಭಾಗಿಯಾಗಿದ್ದ ಆರ್‌ಸಿಬಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್‌ಸಿಎ) ಸದಸ್ಯರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಕೆಎಸ್‌ಸಿಎ ಕಾರ್ಯದರ್ಶಿ ಮತ್ತು ಖಜಾಂಚಿ ಸದ್ಯ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಬಂಧಿತ ನಿಖಿಲ್ ಸೋಸಲೆ, ಆರ್‌ಸಿಬಿ ತಂಡದ ನಿರ್ವಹಣೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊಂದಿದ್ದರು. ಈ ವಿಜಯೋತ್ಸವ ಕಾರ್ಯಕ್ರಮವನ್ನು ಡಿಎನ್‌ಎ ಜತೆಗೆ ನಿಖಿಲ್​ ಸಂಘಟಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಯಾರು ಈ ಸೋಸಲೆ?

ಲಿಂಕ್ಡ್​ಇನ್​ ಪ್ರೊಫೈಲ್​ ಪ್ರಕಾರ, ಕಳೆದ ಎರಡು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಆರ್​ಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಖಿಲ್ ಸೋಸಲೆ, ಆದಾಯ ಮತ್ತು ಮಾರ್ಕೆಟಿಂಗ್ ಹೆಡ್​ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ಆರ್‌ಸಿಬಿಯ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಅನ್ನು ನಿರ್ವಹಿಸುವ ಡಯಾಜಿಯೊ ಇಂಡಿಯಾದ ಉದ್ಯೋಗಿ ಈ ಸೋಸಲೆ. ವಿಜಯ್​ ಮಲ್ಯ ದೇಶ ಬಿಟ್ಟು ಹೊರಹೋಗ್ತಿದ್ದಂತೆ ಯುಎಸ್​ಎಲ್​, ಆರ್​ಸಿಬಿಯ ಪೂರ್ಣ ಅವಧಿ ಮಾಲೀಕತ್ವವನ್ನು ವಹಿಸಿಕೊಂಡಿತು.

ಆರ್​ಸಿಬಿ ಫ್ರಾಂಚೈಸಿಯ ಬ್ರ್ಯಾಂಡ್​ ಅನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವಲ್ಲಿ ಸೋಸಲೆ ಪಾಲೂ ಇದೆ. ಡಯಾಜಿಯೊ ಸಂಸ್ಥೆ ಜೊತೆಗೆ 13 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಆರ್​ಸಿಬಿಯೊಂದಿಗೆ ಸಂಪರ್ಕದಲ್ಲಿದ್ದ ಈತ, ಫ್ರಾಂಚೈಸಿಯ ವ್ಯವಹಾರ ಪಾಲುದಾರಿಕೆಗಳ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ.

ಕಾಲ್ತುಳಿತಕ್ಕೆ ಬಲಿಯಾದ ಅಭಿಮಾನಿಗಳಿವರು

ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಎರಡು ದ್ವಾರಗಳಲ್ಲಿ ನಡೆದ ಕಾಲ್ತುಳಿತದಲ್ಲಿ ಒಟ್ಟು ಹನ್ನೊಂದು ಅಭಿಮಾನಿಗಳು ಸಾವನ್ನಪ್ಪಿದ್ದು, 47 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಎ.ಎಸ್. ದಿವ್ಯಾಂಶಿ (13), ದೊರೆಶ (32), ಭೂಮಿಕ್ (20), ಸಹನಾ (25), ಅಕ್ಷತಾ (27), ಮನೋಜ್ (33), ಶ್ರವಣ್ (20), ದೇವಿ (29), ಶಿವಲಿಂಗ (17) ಮತ್ತು ಚಿನ್ಮಯಿ (19) ಮತ್ತು ಪ್ರಜ್ವಲ್ (20) ಎಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net