ಜನರ ತೀರ್ಮಾನವೇ ಅಂತಿಮ, ನಾನು ತಲೆಬಾಗುತ್ತೇನೆ; ಹ್ಯಾಟ್ರಿಕ್​ ಸೋಲಿನ ಬಳಿಕ NIkhil Kumaraswamy ಫಸ್ಟ್​ ರಿಯಾಕ್ಷನ್​

Nikhil Kumaraswamy
Published on

ರಾಮನಗರ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್​ ಪಕ್ಷ ಮೂರು ಕ್ಷೇತ್ರಗಳಲ್ಲಿ ಭರ್ಜರಿ ಜಯಗಳಿಸಿದೆ. ಇನ್ನೂ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಸೋಲುಂಡಿದ್ದು, ಹಲವರಲ್ಲಿ ಆಶ್ಚರ್ಯ ಮೂಡಿಸಿದ್ದು, ಈ ಬಗ್ಗೆ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಮಾತನಾಡಿದ್ದಾರೆ.

ಬಿಡದಿಯ ತೋಟದ ಮನೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್​, ಚನ್ನಪಟ್ಟಣ ಕ್ಷೇತ್ರದ  ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇನೆ. ಇದು ಬಯಸದೇ ಬಂದ ಉಪಚುನಾವಣೆ, 87 ಸಾವಿರ ಮತ ನೀಡಿದ ಚನ್ನಪಟ್ಟಣ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಜೆಡಿಎಸ್​, ಬಿಜೆಪಿ ಕಾರ್ಯಕರ್ತರಿಗೂ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಎಲ್ಲರಿಗೂ ಧ್ವನಿಯಾಗಿ ಕೆಲಸ ಮಾಡ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ. ಎಲ್ಲಿ ಎಡವಿದ್ದೇವೆ ಅಂತ ಚರ್ಚೆ ಮಾಡುತ್ತೇವೆ. ಈ ಸೋಲನ್ನು ನಾನೇ ಸ್ವೀಕಾರ ಮಾಡ್ತೇನೆ. ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇವೆ. ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಅವರನ್ನು ಬೆಳೆಸಿದ್ದು ರಾಮನಗರ ಜಿಲ್ಲೆಯ ಜನ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನಾನು ಭರವಸೆ ಕೊಟ್ಟಿದ್ದೆ. ಆ ಭರವಸೆ ಕೇವಲ ಚುನಾವಣೆಗೆ ಸಂಬಂಧಪಟ್ಟಿದ್ದಲ್ಲ. ನಾನು ಕೊಟ್ಟ ಮಾತನ್ನು ಹಿಂಪಡೆಯಲ್ಲ ಎಂದು ವಾಗ್ದಾನ ಮಾಡಿದ್ದಾರೆ.

Nikhil Kumaraswamy

ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ. ಚುನಾವಣಾ ಸಂದರ್ಭದಲ್ಲಿ ನಾನು ಕೆಲವು ಮಾತು ಕೊಟ್ಟಿದ್ದೆ ಆ ಮಾತನ್ನ ಚುನಾವಣೆಯ ಸೋಲು-ಗೆಲುವು ನಿರ್ಧಾರ ಮಾಡಲ್ಲ. ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಾತಿನಿಂದ ಹಿಂದೆ ಸರಿಯಲ್ಲ. ನಾನು ಈ ಜಿಲ್ಲೆಯ ಮಗ ಎಂದು ಭಾವಿಸುತ್ತೇನೆ. ನಾನು ಇಲ್ಲಿ ಹುಟ್ಟದೆ ಇರಬಹುದು ಆದರೆ ಭಾವನಾತ್ಮಕವಾಗಿ ಸಂಬಂಧ ಇದೆ.

ನಾನು ಮೂರು ಬಾರಿ ಸೋತಿದ್ದೇನೆ. ನಾನು ಗೆಲುವನ್ನು ನೋಡಿಲ್ಲ. ಇತಿಹಾಸ ನೋಡಿದರೆ ಅಬ್ರಾಹಂ ಲಿಂಕನ್, ಅಂಬೇಡ್ಕರ್, ವಾಜಪೇಯಿ ಸೋತಿದ್ದು ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಕೊಟ್ಟು ಅವರು ಸೋತಿದ್ದರೆ ಕುಟುಂಬ, ರಾಜಕಾರಣ, ಸ್ವಾರ್ಥ ಎಂಬ ಆರೋಪ ಬರುತ್ತಿತ್ತು. ಇವಾಗ ಈ ಹೊಣೆ ನಾನೇ ಹೊರುತ್ತೇನೆ ನೆಮ್ಮದಿಯಿಂದ ಮಲಗುತ್ತೇನೆ. ಈ ಒಂದು ಸೋಲಿನಿಂದ ಜಿಲ್ಲೆಯಲ್ಲಿ ಜೆಡಿಎಸ್ ಮುಕ್ತ ಅಂದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಲೋಕಸಭೆಯಲ್ಲಿ ಸೋತರು ಅವರ ಬಲವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಈ ಗೆಲವಿನಿಂದ ಅವರ ಬಲ ಮತ್ತೆ ಹೆಚ್ಚಿದೆ ಎನ್ನಲು ಸಾಧ್ಯವಿಲ್ಲ ಎಂದು ಉಪಚುನಾವಣೆ ಸೋಲಿನ ಕುರಿತು ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net