

ಬೆಂಗಳೂರು: ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ತೆರೆಬಿದ್ದ ಬೆನ್ನಲ್ಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಅಣಿಯಾಗಿದೆ. ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ, ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರೆ, ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದ್ದ ಶಿಗ್ಗಾಂವಿಯಲ್ಲಿ ಯಾಸಿರ್ ಅಹ್ಮದ್ ಪಠಾಣ್ಗೆ ಅವಕಾಶ ನೀಡಿದೆ. ನಾಮಪತ್ರ ಸಲ್ಲಿಕೆಗೆ ಅ.25 ಕೊನೇ ದಿನವಾಗಿದೆ.
ಸಿಎಂ ಪವರ್ ಶೋ: ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಗುರುವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜತೆಗೂಡಿ ರೋಡ್ ಶೋ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರೆ, ಸಂಡೂರಿನಲ್ಲಿ ಸಂಸದ, ತಮ್ಮ ಪತಿ ತುಕಾರಾಂ ಜತೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿದ್ದು, ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ನಾಯಕರೊಡಗೂಡಿ ತಮ್ಮ ಪುತ್ರನ ನಾಮಪತ್ರ ಸಲ್ಲಿಕೆಗೆ ಮುನ್ನ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸಮನ್ವಯ ಸಭೆ ನಡೆಸಲಾಯಿತು. ಸಭೆಯ ಬಳಿಕ ನಿಖಿಲ್ ಕುಮಾರಸ್ವಾಮಿ ಎನ್ಡಿಎ ಅಭ್ಯರ್ಥಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂಪ್ಪ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದರು.
ಆಯ್ಕೆ ಹಿಂದಿನ ಲೆಕ್ಕಾಚಾರ: ಯೋಗೇಶ್ವರ್ ತಮ್ಮದೇ ಮತ ಬ್ಯಾಂಕ್ ಹೊಂದಿದ್ದು, ಕಾಂಗ್ರೆಸ್ ಸಾಂಪ್ರದಾಯಿಕ ಮತ ಸೇರಿಕೊಂಡರೆ ಚನ್ನಪಟ್ಟಣದಲ್ಲಿ ಗೆಲುವು ಕಷ್ಟವಾಗಲಿಕ್ಕಿಲ್ಲ ಎಂಬುದು ಕೈಪಾಳಯದ ಅಂದಾಜು. ಸಂಡೂರಿನಲ್ಲಿ ತುಕಾರಂ ಪ್ರಭಾವ ಗಟ್ಟಿಯಾಗಿರುವುದರಿಂದ ಅವರ ಪತ್ನಿಗೆ ಅವಕಾಶ ನೀಡುವ ಮೂಲಕ ಹೆಚ್ಚಿನ ಪ್ರಯೋಗಕ್ಕೆ ಆಸಕ್ತಿ ತೋರಿಸಿಲ್ಲ. ಸಂಸದ ಬಸವರಾಜ ಬೊಮ್ಮಾಯಿ ನಿರಂತರವಾಗಿ ಗೆದ್ದು ಬರುತ್ತಿರುವ ಶಿಗ್ಗಾಂವಿ ಉಳಿಸಿಕೊಳ್ಳಲು ಅವರ ಪುತ್ರನಿಗೆ ಅವಕಾಶ ಕೊಟ್ಟರೆ ಮಾತ್ರ ಸಲೀಸು ಎಂದು ಬಿಜೆಪಿ ಲೆಕ್ಕಹಾಕಿದಂತಿದೆ. ಸಂಡೂರಿನಲ್ಲಿ ಕಾಂಗ್ರೆಸ್ ತುಕಾರಾಂ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಬಂಗಾರು ಹನುಮಂತು ಹೊಸ ಪ್ರಯೋಗ ಎಂಬಂತೆ ಬಳಸಿಕೊಂಡಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ಗೆ ಪೈಪೋಟಿ ನೀಡ ಬೇಕೆಂದರೆ ನಿಖಿಲ್ ಸೂಕ್ತ ಎಂಬ ಲೆಕ್ಕಾಚಾರದಲ್ಲಿ ಕಣಕ್ಕಿಳಿಸಲಾಗಿದೆ.
ಕಾಂಗ್ರೆಸ್
ಬಿಜೆಪಿ- ಜೆಡಿಎಸ್
ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿ ಅಥವಾ ಜೆಡಿಎಸ್ನವರು ಯಾರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತಾರೆಂಬುದು ನಮಗೆ ಮುಖ್ಯವಲ್ಲ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ಗೆಲುವು ಸಾಧಿಸಲಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ
ನಾನು ಚನ್ನಪಟ್ಟಣದಲ್ಲೇ ಇದ್ದು ಪ್ರಚಾರ ಮಾಡುತ್ತೇನೆ. ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿದ್ದೇವೆ.
| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ