

ಹೈದರಾಬಾದ್: ಹಿರಿಯ ನಟ ನಾಗೇಂದ್ರ ಬಾಬು ಅವರ ಮಗಳು, ನಟಿ ಹಾಗೂ ನಿರ್ಮಾಪಕಿ ನಿಹಾರಿಕಾ ಕೊನಿದೆಲಾ ಅವರು ವ್ಯವಹಾರ ತಂತ್ರಜ್ಞ ಚೈತನ್ಯ ಜೊನ್ನಲಗಡ್ಡರನ್ನು ವರಿಸಲು ಸಿದ್ಧತೆಗಳು ನಡೆದಿವೆ. ಆಗಸ್ಟ್ 13ರಂದು ನೂತನ ಜೋಡಿಯ ನಿಶ್ಚಿತಾರ್ಥವೂ ಸಹ ನೆರವೇರಿದೆ.
ಮಗಳು ವಿವಾಹ ಸಿದ್ಧತೆಯ ನಡುವೆ ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ನಾಗೇಂದ್ರ ಬಾಬು ಅವರು ಎರಡು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದು ಕೂಡ ಆತ್ಮಹತ್ಯೆಗೆ ಸಂಬಂಧಿಸಿದ್ದಾಗಿದೆ.
ರಜಾ ದಿನಗಳಲ್ಲಿ ನಾನು, ನನ್ನ ಪತ್ನಿ ಮತ್ತು ಮಕ್ಕಳಾದ ವರುಣ್ ತೇಜ ಹಾಗೂ ನಿಹಾರಿಕಾ ನ್ಯೂಜಿಲೆಂಡ್ಗೆ ತೆರಳಿದ್ದೆವು. ಆವಾಗ ಮಕ್ಕಳಿಬ್ಬರು ಚಿಕ್ಕವರಾಗಿದ್ದರು. ಪ್ರವಾಸ ವೇಳೆ ನನ್ನಂತೆಯೇ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬನ ಜತೆ ನಿಹಾರಿಕ ಹೊರಟು ಹೋಗಿದ್ದಳು. ಇದರಿಂದ ನಾನು ತುಂಬಾ ಚಿಂತೆಗೀಡಾಗಿದ್ದೆ. ನಾನು ನಿಯಂತ್ರಣ ಕಳೆದುಕೊಂಡಿದ್ದೆ. ಇನ್ನು 20 ನಿಮಿಷಗಳಲ್ಲಿ ಮರಳಿ ಬರದೇ ಹೋಗಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ನನ್ನ ಮಗಳು ನಿಹಾರಿಕಾ ನನ್ನ ಪ್ರಾಣ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ನಟ ರಾಮ ಚರಣ್ ಅಭಿನಯದ ಆರೇಂಜ್ ಚಿತ್ರವೂ ಬಾಕ್ಸ್ಆಫೀಸ್ನಲ್ಲಿ ಮಕಾಡೆ ಮಲಗಿ ಭಾರಿ ವೈಫಲ್ಯ ಅನುಭವಿಸಿದಾಗಲೂ ಆತ್ಮಹತ್ಯೆಗೆ ನಿರ್ಧರಿಸಿದ್ದೆ. ಆದರೆ, ನನ್ನ ಸಹೋದರರಾದ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ನನಗೆ ಸಹಾಯ ಮಾಡಿದರು ಎಂದು ನಾಗೇಂದ್ರ ಬಾಬು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)