

ಬೆಂಗಳೂರು: ಕನ್ನಡದ ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಮೋಹನ್ಲಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ವೃಷಭ’ ಚಿತ್ರದ ಮುಹೂರ್ತ ಇತ್ತೀಚೆಗಷ್ಟೆ ನೆರವೇರಿದೆ.
ಇದೊಂದು ಆ್ಯಕ್ಷನ್ ಎಂಟರ್ಟೇನರ್ ಆಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಬಿಗ್ ಬಜೆಟ್ ಚಿತ್ರ. ಇದರಲ್ಲಿ ಮೋಹನ್ಲಾಲ್ ಜತೆ ರೋಶನ್ ಮೇಕಾ, ಬಾಲಿವುಡ್ನ ಶನಾಯಾ ಕಪೂರ್, ಜಹ್ರಾ ಎಸ್. ಖಾನ್ ಪ್ರಮುಖ ತಾರಾಬಳಗದಲ್ಲಿದ್ದಾರೆ. ಇದು ಹಾಲಿವುಡ್ ಸಿನಿಮಾಗಳ ಮಾದರಿಯಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರಕ್ಕೆ ಹಾಲಿವುಡ್ನ ನಿಕ್ ತರ್ಲೋ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿರುವುದು ಮತ್ತೊಂದು ವಿಶೇಷ. ಆಸ್ಕರ್ ಪ್ರಶಸ್ತಿ ಗೆದ್ದಿರುವ ‘ಮೂನ್ಲೈಟ್’, ‘ಮಿಸೌರಿ’, ‘ಥ್ರೀ ಬಿಲ್ಬೋರ್ಡ್ಸ್ ಔಟ್ಸೈಡ್ ಎಬ್ಬಿಂಗ್’ ಸೇರಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ನಿಕ್, ಇದೇ ಮೊದಲ ಬಾರಿಗೆ ಭಾರತೀಯ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ನಿಕ್, ‘ಮೊದಲ ಭಾರತೀಯ ಚಿತ್ರದಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಚಿತ್ರದ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದೇನೆ. ಏಕಕಾಲಕ್ಕೆ ಐದಾರು ಭಾಷೆಗಳಲ್ಲಿ ತಯಾರಾಗುತ್ತಿರುವುದರಿಂದ ನಾನು ಕೂಡ ಈ ಚಿತ್ರದಿಂದ ಸಾಕಷ್ಟು ಕಲಿಯುವುದಿದೆ. ಈ ಹೊಸ ಅನುಭವ ಅದ್ಭುತವಾಗಿರಲಿದೆ ಎಂಬ ಭರವಸೆಯಿದೆ’ ಎಂದು ಹೇಳಿಕೊಂಡಿದ್ದಾರೆ.