NIA ಜಯಾ ರಾಯ್, ಆಶಿಶ್ ಬಾತ್ರಾರಿಂದ 'ರಾಣಾ' ವಿಚಾರಣೆ; NIA ಪ್ರಧಾನ ಕಚೇರಿಯ ವಿಶೇಷ ಕೋಣೆಯಲ್ಲಿ ತನಿಖೆ| tahawwur Rana

tahawwur
Published on

tahawwur Rana | 2008ರ ಮುಂಬೈ ಭಯೋತ್ಪಾದಕ ದಾಳಿಯ 'ಮಾಸ್ಟರ್ ಮೈಂಡ್' ಆರೋಪಿ ತಹವ್ವೂರ್ ರಾಣಾನನ್ನು ದೆಹಲಿಯ ಎನ್‌ಐಎ ಕೇಂದ್ರ ಕಚೇರಿಯಲ್ಲೇ ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ತನಿಖೆಯನ್ನು ಇಬ್ಬರು ಹಿರಿಯ ಭಾರತೀಯ ಪೊಲೀಸ್  (ಐಪಿಎಸ್) ಅಧಿಕಾರಿಗಳಾದ ಜಯ ರಾಯ್ ಮತ್ತು ಆಶಿಶ್ ಬಾತ್ರಾ ನೇತೃತ್ವ ವಹಿಸಿದ್ದಾರೆ. ಪ್ರಕರಣದ ತನಿಖೆ ನಡೆಸುವ 12 ಸದಸ್ಯರ NIA ತಂಡವನ್ನು ಈ ಇಬ್ಬರೂ ಮುನ್ನಡೆಸುತ್ತಿದ್ದಾರೆ. ಕಚೇರಿಗೆ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದ್ದು, ಸ್ಥಳೀಯ ಪೊಲೀಸರು ಮತ್ತು ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಐಪಿಎಸ್ ಜಯಾ ರಾಯ್ ಯಾರು?

ಜಯಾ ರಾಯ್ ಜಾರ್ಖಂಡ್ ಕೇಡರ್‌ನ 2011 ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಅವರನ್ನು ಎನ್‌ಐಎ ತಂಡದ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಆಗಿ ನೇಮಕ ಮಾಡಲಾಗಿದೆ.

ಏಪ್ರಿಲ್ 22, 1979 ರಂದು ಪಶ್ಚಿಮ ಬಂಗಾಳದಲ್ಲಿ ಜನಿಸಿದ ರಾಯ್, 2011 ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಭಾರತೀಯ ಪೊಲೀಸ್ ಸೇವೆಗೆ ಸೇರಿದರು. ರಾಯ್ ತಮ್ಮ ಆರಂಭಿಕ ವರ್ಷಗಳ ಸೇವೆಯನ್ನು ಜಾರ್ಖಂಡ್​​ನಲ್ಲಿ ಸಲ್ಲಿಸಿದರು. ಅಲ್ಲಿ ಅವರ ತಂಡವು ಜಮ್ತಾರಾದಲ್ಲಿ ಸೈಬರ್ ಅಪರಾಧಿಗಳನ್ನು ಹತ್ತಿಕ್ಕಿದಾಗ ಅವರು ಹೆಚ್ಚಿನ ಖ್ಯಾತಿಯನ್ನು ಗಳಿಸಿದರು. ಜಯಾ ರಾಯ್ ಅವರನ್ನು 2019 ರಲ್ಲಿ ಕೇಂದ್ರ ನಿಯೋಜನೆಗೆ ಕರೆಯಲಾಯಿತು. ಅವರು NIA ಗೆ ಪೊಲೀಸ್ ಸೂಪರಿಂಟೆಂಡೆಂಟ್ (SP) ಆಗಿ ಸೇರಿದರು ಮತ್ತು ಡಿಐಜಿಯಾಗುವವರೆಗೆ ಹುದ್ದೆಯನ್ನು ಅಲಂಕರಿಸಿದರು.

ಐಪಿಎಸ್ ಆಶಿಶ್ ಬಾತ್ರಾ ಯಾರು?

ತಹವೂರ್ ರಾಣಾ ಪ್ರಕರಣದ ತನಿಖೆ ನಡೆಸುತ್ತಿರುವ NIA ತಂಡದ ಮತ್ತೊಬ್ಬ ನಾಯಕ ಆಶಿಶ್ ಬಾತ್ರಾ ಆಗಿದ್ದಾರೆ. ಅವರು 1997 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಜಾರ್ಖಂಡ್ ಕೇಡರ್​ನಲ್ಲಿ ಸೇವೆ ಸಲ್ಲಿಸಿದ್ದಾರೆ. ಬಾತ್ರಾ ಪ್ರಸ್ತುತ NIA ತಂಡದ ಇನ್ಸ್‌ಪೆಕ್ಟರ್ ಜನರಲ್ (IG) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾತ್ರಾ ಅವರನ್ನು 2019 ರಲ್ಲಿ ಐದು ವರ್ಷಗಳ ಅವಧಿಗೆ NIA ಗೆ ನಿಯೋಜಿಸಲಾಯಿತು. ಇದನ್ನು ಕೇಂದ್ರ ಗೃಹ ಸಚಿವಾಲಯ ಎರಡು ವರ್ಷಗಳ ಕಾಲ ವಿಸ್ತರಣೆ ಮಾಡಿತು.

ರಾಣನ ಪರಿಸ್ಥಿತಿ ಹೇಗಿದೆ?

ರಾಣಾನನ್ನು ಎನ್‌ಐಎ ಕಟ್ಟಡದ ಕೆಳಮಹಡಿಯಲ್ಲಿರುವ 14x14 ಅಡಿ ವಿಸ್ತೀರ್ಣದ ಕೋಣೆಯಲ್ಲಿ ಇರಿಸಲಾಗಿದೆ. ಆತನ ತನಿಖೆಯನ್ನು ಶುಕ್ರವಾರದಿಂದ ಇದೇ ಕೋಣೆಯಲ್ಲಿ ಪ್ರಾರಂಭಿಸಲಾಗಿದೆ. ಈ ಕೋಣೆಯಲ್ಲಿ ನೆಲದ ಮೇಲೆ ಹಾಸಿಗೆ ಹಾಸಲಾಗಿದ್ದು, ಶೌಚಾಲಯದ ವ್ಯವಸ್ಥೆಯೂ ಇದೆ. ಊಟ, ಕುಡಿಯುವ ನೀರು, ವೈದ್ಯಕೀಯ ಸೇವೆಗಳನ್ನು ಆತನ ಕೋಣೆಗೆ ತಲುಪಿಸಲಾಗುತ್ತದೆ.

ರಾಣನ ವಿಚಾರಣೆ ಹೇಗಿರಲಿದೆ?

(ಏಜೆನ್ಸೀಸ್)

ಎನ್‌ಐಎ ಅಧಿಕಾರಿಗಳು 18 ದಿನಗಳ ಅವಧಿಯಲ್ಲಿ ಮುಂಬಯಿ ದಾಳಿಯ ಸಂಪೂರ್ಣ ಸಂಚನ್ನು ಬಾಯಿ ಬಿಡಿಸುವ ಉದ್ದೇಶ ಹೊಂದಿದ್ದಾರೆ. ಲಷ್ಕ‌ರ್ ಒಟ್ಟಿಗಿನ ರಾಣಾಗಿದ್ದ ನಂಟು, ಡೇವಿಡ್ ಹೆಡ್ಲಿಗೂ ರಾಣಾಗೂ ಇದ್ದ ಸಂಬಂಧ, ಪಾಕ್ ಐಎಸ್‌ಐ ಜತೆ ಇವರಿಗಿದ್ದ ನಂಟು, ದಾಳಿಯಲ್ಲಿ ಇವರ ನಿಖರ ಪಾತ್ರಸೇರಿ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಎನ್‌ಐಎ ಉದ್ದೇಶವಾಗಿದೆ. ಇದಲ್ಲದೇ ದಾಳಿಗೆ ಮುನ್ನ ರಾಣಾ ಉತ್ತರ, ದಕ್ಷಿಣ ಭಾರತದಲ್ಲಿ ಸುತ್ತಾಡಿದ್ದ ಪ್ರಯಾಣ ಹಾಗೂ ದೇಶದ ಬೇರೆ ಭಾಗಗಳ ಮೇಲೆ ದಾಳಿಗೂ ಉಗ್ರರು ಸಂಚು ರೂಪಿಸಲಾಗಿತ್ತಾ ಎಂಬುದನ್ನು ಆತನಿಂದಲೇ ಖಚಿತಪಡಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net