₹980 ಕೋಟಿ ಮೌಲ್ಯದ ಭೂಮಿ ವಶ: ಈಗಲ್‌ಟನ್ ರೆಸಾರ್ಟ್ ಸಂಸ್ಥೆ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನು

14 bidadi photo 2
Published on

ಬಿಡದಿ : ಈಗಲ್‌ಟನ್ ರೆಸಾರ್ಟ್ ಸಂಸ್ಥೆಯಿಂದ ಒತ್ತುವರಿಯಾಗಿದ್ದ ಕೋಟ್ಯಂತರ ರೂ. ಬೆಲೆ ಬಾಳುವ 77.18 ಎಕರೆ ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತ ಮಂಗಳವಾರ ವಶಕ್ಕೆ ಪಡೆದು ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದೆ.

ರೆಸಾರ್ಟ್‌ನ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ.ಲಿ ಒತ್ತುವರಿ ಮಾಡಿಕೊಂಡಿದ್ದ ಜಾಗದ ಮೌಲ್ಯ 980 ಕೋಟಿ ರೂ. ಎಂದು ಅಂದಾಜಿಸಿ ಜಿಲ್ಲಾಡಳಿತ ಸರ್ಕಾರಕ್ಕೆ ಠೇವಣಿ ಕಟ್ಟಲು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ ಲಿ 77.18 ಎಕರೆಗೆ 12.35 ಕೋಟಿ ರೂಗಳನ್ನು ಪಾವತಿಸಲು ಸಿದ್ಧವಿರು ವುದಾಗಿ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ಸರ್ಕಾರಕ್ಕೆ ಹಣ ಪಾವತಿಸದ ಹಿನ್ನೆಲೆ ಮತ್ತು ಸರ್ಕಾರಿ ಜಾಗದಲ್ಲಿ ಗಾಲ್ಫ್, ರಸ್ತೆ, ವಿಲ್ಲಾ ನಿರ್ಮಾಣಕ್ಕೆ ಕಂಪನಿ ವಶಪಡಿಸಿಕೊಂಡಿರುವ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಲು ಮಂಗಳವಾರ ಬೆಳಗ್ಗೆಯೇ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಆದೇಶದಂತೆ ಕಾರ್ಯಾಚರಣೆಗಿಳಿದ ಉಪ ವಿಭಾಗಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತಹಸೀಲ್ದಾರ್ ವಿಜಯ್‌ಕುಮಾರ್, ಉಪ ತಹಸೀಲ್ದಾರ್ ಮಂಜುನಾಥ್, ರಾಜಸ್ವ ನಿರೀಕ್ಷಕ ಪ್ರಸನ್ನಕುಮಾರ್, ಸರ್ವೇ ಅಧಿಕಾರಿಗಳು ಅಳತೆ ಕಾರ್ಯ ಮುಗಿಸಿದರು.

ರೆಸಾರ್ಟ್‌ನಲ್ಲಿರುವ ಸರ್ಕಾರಿ ಜಮೀನು ಬಹುಪಾಲು ಗಾಲ್ಫ್‌ಕೋರ್ಟ್ ನಿರ್ಮಿಸಿರುವ ಭಾಗವಾಗಿದೆ. ಇದೀಗ ಆ ಜಮೀನನ್ನು ವಶಕ್ಕೆ ಪಡೆದಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದ್ದ ಗಾಲ್ಪ್ ಭೂ ಪ್ರದೇಶವೇ ಇಲ್ಲದಿದ್ದಲ್ಲಿ ಈಗಲ್‌ಟನ್‌ನ ರೆಸಾರ್ಟ್‌ಗೆ ಪೆಟ್ಟು ಬೀಳಲಿದೆ ಎಂದೇಳಲಾಗುತ್ತಿದೆ.

ರೈತ ಸಂಘವೂ ಹೋರಾಟ ನಡೆಸಿತ್ತು: ಈಗಲ್‌ಟನ್ ಸಂಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ತರುವಂತೆ ರೈತ ಸಂಘದ ಮುಖಂಡ ಸಿ.ಪುಟ್ಟಸ್ವಾಮಿ ನೇತೃತ್ವದಲ್ಲಿ ರೈತ ಮತ್ತು ಕನ್ನಡಪರ ಸಂಘಟನೆಗಳು ಈಗಲ್‌ಟನ್ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಅಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಈ ಸಂಬಂಧ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ, ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

ಠೇವಣಿ ವಸೂಲಿಗೆ ಸೂಚಿಸಿದ್ದ ಸುಪ್ರೀಂಕೋರ್ಟ್: ಬಿಡದಿ ಹೋಬಳಿ ಬಿಲ್ಲಕೆಂಪನಹಳ್ಳಿ ಸಮೀಪ 1995ರಲ್ಲಿ ಚಾಮುಂಡೇಶ್ವರಿ ಬಿಲ್ಡ್‌ಟೆಕ್ ಪ್ರೈ.ಲಿ ಒಡೆತನದ ಈಗಲ್‌ಟನ್ ಗಾಲ್ಫ್ ರೆಸಾರ್ಟ್ ಸಂಸ್ಥೆ, 132.26 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಲೇಔಟ್ ರಚಿಸಿತ್ತು. ಈ ಒತ್ತುವರಿ ವಿರುದ್ಧ 1997ರಲ್ಲಿ ಅಂದಿನ ರಾಮನಗರ ತಹಸೀಲ್ದಾರ್, ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ಪ್ರಶ್ನಿಸಿ ಸಂಸ್ಥೆ ಕಾನೂನು ಹೋರಾಟ ನಡೆಸಿದರೂ ಸರ್ಕಾರಿ ಜಮೀನು ಸ್ವಾಧೀನಪಡಿಸಿಕೊಳ್ಳುವಂತೆ ವಿವಿಧ ಹಂತಗಳ ನ್ಯಾಯಾಲಯಗಳು ಆದೇಶ ನೀಡಿದ್ದವು.

ಕೊನೆಗೆ 2002ರಲ್ಲಿ ಸಂಸ್ಥೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್ ಸಹ ಅಧೀನ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. 2014ರ ಜನವರಿಯಲ್ಲಿ ಸುಪ್ರೀಂಕೋರ್ಟ್, ಒತ್ತುವರಿ ಮಾಡಿಕೊಂಡಿರುವ ಜಮೀನಿನಲ್ಲಿ 77.18 ಎಕರೆ ಪ್ರದೇಶಕ್ಕೆ ಮಾರುಕಟ್ಟೆ ಬೆಲೆ ನಿಗದಿಪಡಿಸಿ ಠೇವಣಿ ವಸೂಲಿ ಮಾಡಲು ಆದೇಶಿಸಿತ್ತು. ಆದೇಶದಂತೆ ರಾಮನಗರದ ಅಂದಿನ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ವರದಿ ಸಿದ್ದಪಡಿಸಿ 2014ರ ಜೂನ್ 11ರಂದು ಕಂದಾಯ ಇಲಾಖೆಗೆ ವರದಿ ಸಲ್ಲಿಸಿದ್ದರು.

ಈ ವರದಿ ಪ್ರಕಾರ ಪ್ರಸ್ತುತ ಮಾರುಕಟ್ಟೆ ದರದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಜಮೀನು ಆಧಾರವಾಗಿ ಇಟ್ಟುಕೊಂಡು ಪ್ರತಿ ಚದರ ಅಡಿಗೆ 2904 ರೂ. ದರ ನಿಗದಿಪಡಿಸಿದ್ದ ಕಡತ ಸಂಪುಟದ ಉಪ ಸಮಿತಿ ಮುಂದೆ ಬಂದು, ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ಮತ್ತು ತಂಡದ ಸದಸ್ಯರು ಸ್ಥಳ ಪರಿಶೀಲನೆ ಸಹ ನಡೆಸಿದ್ದರು.

ವರದಿ ಪ್ರಕಟಿಸಿದ್ದ ವಿಜಯವಾಣಿ : ಸರ್ಕಾರಿ ಭೂಮಿ ಒತ್ತುವರಿ ವಿಷಯವಾಗಿ ‘ಈಗಲ್‌ಟನ್ ಅಕ್ರಮಕ್ಕೆ ಸಹಕರಿಸಿದವರ ವಿರುದ್ಧ ಕ್ರಮವಿಲ್ಲ’ ಎನ್ನುವ ಶೀರ್ಷಿಕೆಯಡಿ ಕಳೆದ ವರ್ಷ ಸೆ.10ರಂದು ವಿಜಯವಾಣಿ ಪತ್ರಿಕೆ ಜಿಲ್ಲಾಡಳಿತದ ಮೌನದ ಬಗ್ಗೆ ವಿಸ್ತೃತ ವರದಿ ಮಾಡಿತ್ತು. ಅಂದಿನ ಜಿಲ್ಲಾಧಿಕಾರಿ ಜಮಾದಾರ್ ಅವರು, ಎಸಿ ಡಾ.ರಾಜೇಂದ್ರ ಪ್ರಸಾದ್ ಗೆ ಜಮೀನು ವಶಕ್ಕೆ ಪಡೆಯುವ ಜವಾಬ್ದಾರಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net