

ಬೆಂಗಳೂರು: ಜಮೀನಿನಲ್ಲಿ ಉಳುಮೆ ಮಾಡುವಾಗ 4 ಕೆಜಿ ಚಿನ್ನದ ನಾಣ್ಯ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಮೆಡಿಕಲ್ ಶಾಪ್ ಮಾಲೀಕನಿಗೆ ನಂಬಿಸಿ 12 ಲಕ್ಷ ರೂ. ವಂಚನೆ ಮಾಡಲಾಗಿದೆ. ಬಳಿಕ, ಹಣ ರಿಕವರಿ ಮಾಡಿರುವುದಾಗಿ ಪೊಲೀಸರ ಸೋಗಿನಲ್ಲಿ ಮತ್ತೊಂದು ಗ್ಯಾಂಗ್ 75 ಸಾವಿರ ರೂ. ಪಡೆದು ಮೋಸ ಮಾಡಿದೆ.
ದೇವನಹಳ್ಳಿಯ ವಿಜಯಪುರ ನಗರದ ಜೆ.ತಬ್ರೇಜ್ ವಂಚನೆಗೆ ಒಳಗಾದವರು. ಇವರ ದೂರಿನ ಮೇರೆಗೆ ದಾವಣಗೆರೆ ಮೂಲದ ರಮೇಶ್, ಮೆಹಬೂಬ್, ಯುವರಾಜ್ ಮತ್ತು ಮೂರ್ತಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾ.12ರಂದು ತಬ್ರೇಜ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಅಂಗಡಿಯಲ್ಲಿ ನೆಗಡಿಗೆ ಮಾತ್ರೆ ತೆಗೆದುಕೊಂಡಿದ್ದು, ಇದೀಗ ವಾಸಿಯಾಗಿದೆ ಎಂದು ಪರಿಚಯ ಮಾಡಿಕೊಂಡಿದ್ದ. ಬಳಿಕ ನಮ್ಮ ಊರಿನಲ್ಲಿ ಓರ್ವ ತಾತ ಇದ್ದು, ಆತನಿಗೆ ಜಮೀನಿನಲ್ಲಿ ಉಳುಮೆ ಮಾಡಬೇಕಾದರೆ 4 ಕೆ.ಜಿ. ಚಿನ್ನದ ನಾಣ್ಯಗಳು ಸಿಕ್ಕಿವೆ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಆಸಕ್ತಿ ಇದ್ದರೆ ದಾವಣಗೆರೆ ಬಸ್ ನಿಲ್ದಾಣಕ್ಕೆ ಬರುವಂತೆ ಸೂಚಿಸಿದ್ದ. ಅದರಂತೆ ತಬ್ರೇಜ್, ಮಾ.13ರಂದು ಬಸ್‌ನಲ್ಲಿ ದಾವಣಗೆರೆಗೆ ಹೋದಾಗ ತಾತ ಮತ್ತು ಮೊಮ್ಮಗ ಭೇಟಿಯಾಗಿ ನಕಲಿ ಚಿನ್ನದ ನಾಣ್ಯ ತೋರಿಸಿ ‘ಇದರ ಮೌಲ್ಯ 80 ಲಕ್ಷ ರೂ. ಆಗಲಿದೆ. ನಿಮಗೆ ಎಷ್ಟು ಬೇಕು’ ಎಂದು ಕೇಳಿದಾಗ, 10 ಲಕ್ಷ ರೂ.ಗಷ್ಟೇ ಕೊಡುವಂತೆ ಮನವಿ ಮಾಡಿದ್ದ.
ಸ್ಯಾಂಪಲ್ ಎಂದು 1,001 ರೂ. ಪಡೆದು ಸಣ್ಣ ನಾಣ್ಯ ಕೊಟ್ಟು ಕಳುಹಿಸಿದ್ದ. ಅದನ್ನು ತಂದು ದೇವನಹಳ್ಳಿಯಲ್ಲಿ ಪರೀಕ್ಷಿಸಿದಾಗ ಅದು ಅಸಲಿ ಎಂದು ಅಕ್ಕಸಾಲಿಗರು ಹೇಳಿದ್ದರು. ತಬ್ರೇಜ್ ಆಸೆಯಿಂದ ತನ್ನ ಬಳಿಯಿದ್ದ 10 ಲಕ್ಷ ರೂ. ಮತ್ತು ಕೈಸಾಲ 2 ಲಕ್ಷ ರೂ. ಪಡೆದು ದಾವಣಗೆರೆಗೆ ಹೋಗಿ 2 ಕೆ.ಜಿ. ಖರೀದಿಸಿಕೊಂಡು ಬಂದಿದ್ದರು. ದೇವನಹಳ್ಳಿಗೆ ಬಂದ ಮೇಲೆ ಪರಿಶೀಲಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಲು ಕರೆ ಮಾಡಿದಾಗ ೆನ್ ಸ್ವೀಕರಿಸದೇ ಇದ್ದಿದ್ದರಿಂದ ತಬ್ರೇಜ್ ದೂರು ಸಲ್ಲಿಸಿದ್ದಾರೆ ಎಂದು ಸಿಸಿಬಿ ಪೊಲೀಸ್ ಠಾಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಕಲಿ ಪೊಲೀಸರಿಂದಲೂ ಮೋಸ
ಮಾರನೇ ದಿನವೇ ತಬ್ರೇಜ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಆರ್.ಟಿ. ನಗರ ಪೊಲೀಸ್ ಎಂದು ಪರಿಚಯ ಮಾಡಿಕೊಂಡು, ‘ನೀವು ವಂಚನೆಗೆ ಒಳಗಾಗಿರುವ ವಿಚಾರ ಗೊತ್ತಾಗಿದೆ. ಕೂಡಲೇ ಠಾಣೆಗೆ ಬನ್ನಿ’ ಎಂದು ಸೂಚನೆ ನೀಡಿದ್ದ. ಆರ್.ಟಿ.ನಗರ ಠಾಣೆ ಎದುರಿನ ಹೋಟೆಲ್‌ಗೆ ಕರೆಸಿಕೊಂಡು ಎಲ್ಲ ಮಾಹಿತಿ ಪಡೆದು ದಾವಣಗೆರೆ ಪೊಲೀಸರ ಸಹಾಯದಿಂದ ಪತ್ತೆಹಚ್ಚುವುದಾಗಿ ಭರವಸೆ ಕೊಟ್ಟು ಕಳುಹಿಸಿದ್ದ. ಮಾರನೇ ದಿನ ಕರೆ ಮಾಡಿ ನಿಮ್ಮ ಕಡೆಯಿಂದ ಹಣ ಪಡೆದು ವಂಚಿಸಿರುವ ಆರೋಪಿಗಳನ್ನು ಬಂಧಿಸಿ 12 ಲಕ್ಷ ರೂ. ರಿಕವರಿ ಮಾಡಲಾಗಿದ್ದು, ಆರ್.ಟಿ.ನಗರ ಠಾಣೆ ಬಳಿಗೆ ಬರುವಂತೆ ಹೇಳಿದ್ದರು.
ಅಲ್ಲಿಗೆ ಹೋದ ಮೇಲೆ, 8 ಲಕ್ಷ ರೂ. ಮಾತ್ರ ರಿಕವರಿ ಆಗಿದೆ. ಈ ಪೈಕಿ 2 ಲಕ್ಷ ರೂ. ಬಾತ್ಮೀದಾರನಿಗೆ ನೀಡಬೇಕಾಗಿದೆ. ನಮಗೆ 1 ಲಕ್ಷ ರೂ. ಕಮಿಷನ್ ಕೊಡಬೇಕೆಂದು ಕೇಳಿದ್ದರು. ಹಣ ಎಲ್ಲಿದೆ ಎಂದಾಗ ಕಾರಿನ ಒಳಗೆ ಇಟ್ಟಿರುವುದಾಗಿ ಹೇಳಿ ತಬ್ರೇಜ್ ಬಳಿ 75 ಸಾವಿರ ರೂ. ಪಡೆದು ಅಲ್ಲಿಂದ ಹೊರಟು ಹೋಗಿದ್ದರು. ಇತ್ತ ತಬ್ರೇಜ್ ಬಂದು ನೋಡಿದಾಗ ಹಣ ಇರಲಿಲ್ಲ. ವಾಪಸ್ ಕರೆ ಮಾಡಿದಾಗ ಮೊಬೈಲ್ ಆ್ ಮಾಡಿಕೊಂಡಿದ್ದರು. ಕೊನೆಗೆ ಇವರು ನಕಲಿ ಪೊಲೀಸ್ ಎಂಬುದು ಗೊತ್ತಾಗಿದೆ.