

ಬಾಗಲಕೋಟೆ: ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಯುನಿಟ್-೩ರಲ್ಲಿ ೨೭೩೫.೬೬ ಕೋಟಿ ರೂ.ಗಳ ವೆಚ್ಚದ ಒಟ್ಟು ೫ ಪ್ಯಾಕೇಜ್‌ಗಳ ಕಾಮಗಾರಿಗಳಿಗೆ ಶಾಸಕ ಡಾ.ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬುಧವಾರ ಹಮ್ಮಿಕೊಂಡ ಯುನಿಟ್-೩ರಲ್ಲಿ ಕೈಗೊಂಡ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯುನಿಟ್-೩ರಲ್ಲಿ ೨೩೯೨ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿ ೧೬೪೩.೩೮ ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನಕ್ಕಾಗಿ ೨೨೧.೬೧ ಕೋಟಿ ರೂ.ಗಳ ಪರಿಹಾರ ಸಹ ನೀಡಲಾಗಿದೆ. ಯುನಿಟ್-೩ರಲ್ಲಿ ೧೧ ಸೆಕ್ಟರಗಳನ್ನಾಗಿ ವಿಂಗಡಿಸಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಅದರಲ್ಲಿ ಒಟ್ಟು ೨೨೨೩೪ ನಿವೇಶನಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಜಿ.ಎಸ್.ಟಿ ಸೇರಿ ಒಟ್ಟು ೨೭೩೫.೬೬ ಕೋಟಿ ರೂ.ಗಳ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಟಿಡಿಎ ಸದಸ್ಯರಾದ ಕುಮಾರ ಎಳ್ಳಿಗುತ್ತಿ, ಶಿವಾನಂದ ಟವಳಿ, ಬಿಟಿಡಿಎ ಮುಖ್ಯ ಇಂಜಿನಿಯರ್ ಮನ್ಮಥಯ್ಯಸ್ವಾಮಿ, ಅಧೀಕ್ಷಕ ಇಂಜಿನಿಯರ್ ಸಂಜೀವ ಕುಮಾರ, ಕಾರ್ಯನಿರ್ವಾಹಕ ಅಭಿಯಂತರ ಕಲ್ಲೂರಮಠ, ವಿ.ಸಿ.ಹೆಬ್ಬಳ್ಳಿ, ಬೆಂಗಳೂರು ಮೆ.ಸ್ಟಾರ ಇನ್‌ಫ್ರಾಟೆಕ್‌ನ ಚಂದ್ರಣ್ಣ,ಸೇರಿದಂತೆ ಇತರರು ಉಪಸ್ಥಿರಿದ್ದರು.