ವಿಜಯವಾಣಿ ಸುದ್ದಿಜಾಲ ಕೋಲಾರ
ನಗರದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗುರುಭವನಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೨.೫೦ ಕೋಟಿ ಅನುದಾನವನ್ನು ಪಡೆದು ೨ ವರ್ಷಗಳ ಒಳಗಾಗಿ ಕಟ್ಟಡವನ್ನು ಪೂರ್ಣಗೊಳಿಸಿ ೨೦೨೭ರ ಶಿಕ್ಷಕರ ದಿನಾಚರಣೆಯನ್ನು ನೂತನ ಕಟ್ಟಡದಲ್ಲಿ ಆಚರಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಶಿಕ್ಷಕ ಸಂಘಟನೆಗಳಲ್ಲಿನ ಗೊಂದಲ ಮತ್ತು ನಾನಾ ಕಾರಣಗಳಿಗಾಗಿ ಸುಮಾರು ಐದಾರು ಬಾರಿ ಶಂಕುಸ್ಥಾಪನೆ ಮಾಡಲಾಗಿರುವ ಗುರುಭವಕ್ಕೆ ಮುಂದೆ ಅಂತಹ ಪರಿಸ್ಥಿತಿ ಬರುವುದಿಲ್ಲ. ವಾರದೊಳಗೆ ಅನುದಾನಕ್ಕೆ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಸಹ ಒಂದು ಎರಡು ದಿನಗಳ ವೇತನವನ್ನು ಕೊಡುವಂತೆ ಮನವಿ ಮಾಡಿದರು.
ಶಿಕ್ಷಕರು ನೀಡುವ ಶಾಲಾ ದಾಖಲೆಗಳು ಮಹತ್ವದ್ದಾಗಿದೆ. ಮಕ್ಕಳು ಭಯಪಡುವುದು ಮಾತ್ರ ಪೋಷಕರಿಗಿಂತ ಹೆಚ್ಚು ಶಿಕ್ಷಕರಿಗೆ. ಶಿಕ್ಷಕರಿಂದ ಸಾವಿರಾರು ವಿಚಾರ ಕಲಿಯಬಹುದು. ಅವರು ಕೊಡುವ ಜ್ಞಾನ, ಬುದ್ದಿ, ಆಚಾರ ವಿಚಾರಗಳು ಬೇರೆ ಎಲ್ಲೂ ಸಿಗುವುದಿಲ್ಲ. ಯಾವಾಗಲೂ ಗುರು ಶಿಷ್ಯರ ಸಂಬAಧ ಗಟ್ಟಿಯಾಗಿರುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ನಾವು ಯಾರೂ ದೇವರನ್ನು ನೋಡಿಲ್ಲ. ತಂದೆ ತಾಯಿ ನಂತರ ಕಣ್ಣಿಗೆ ಕಾಣುವ ದೇವರು ಮಾತ್ರ ಶಿಕ್ಷಕರು. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಯಾಗಿ ತಯಾರಿಸುವ ಶಿಲ್ಪಿಗಳು ಶಿಕ್ಷಕರು. ಖಾಸಗಿ ಶಿಕ್ಷಣ ವ್ಯವಸ್ಥೆಗೆ ಮಾರು ಹೋಗುತ್ತಿದ್ದೇವೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ? ಏಕೆ ದಾಖಲಾತಿ ಕಡಿಮೆ ಆಗುತ್ತಿದೆ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕು. ಸರ್ಕಾರಿ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮ ನೀಡಿದರೂ ದಾಖಲಾತಿ ಕಡಿಮೆ ಆಗುತ್ತಿದೆ. ಉತ್ತಮ ವಾತಾವರಣ ನಿರ್ಮಿಸುವ ಕೆಲಸವನ್ನು ಸರ್ಕಾರಿ ಶಾಲೆಗಳಲ್ಲಿ ನಡೆಯಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಓದಿರುವವರು ದೊಡ್ಡ ಮಟ್ಟದ ಅಧಿಕಾರಿಗಳು ಆಗಿದ್ದಾರೆ. ಅವರಿಂದಲೂ ಸಹಾಯ ಪಡೆಯಬೇಕು. ಸಾಧ್ಯವಾದರೆ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು. ಹಳೆ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಸೌಲಭ್ಯ ಕಲ್ಪಿಸಿಕೊಡಬೇಕು. ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಗುರು ಭವನ ನಿರ್ಮಾಣ ಮಾಡುವುದಾಗಿ ಪ್ರತಿ ಸಲ ಭರವಸೆ ನೀಡುತ್ತಿದ್ದೇವೆ. ಆರೇಳು ಬಾರಿ ಶಂಕುಸ್ಥಾಪನೆ ಮಾಡಿದ್ದೇವೆ. ನಾನು ೧೦ ಲಕ್ಷ ನೀಡಿದ್ದೇನೆ. ಸಂಸದರಾಗಿದ್ದ ಮುನಿಸ್ವಾಮಿ ೨೫ ಲಕ್ಷ ನೀಡಿದ್ದಾರೆ. ಆದರೆ ಕೆಲವು ಸಮಸ್ಯೆಗಳಿಂದ ಹಣ ಬಂದಿಲ್ಲ. ನನ್ನ ಅನುದಾನದಲ್ಲಿ ಕೆಲಸ ಪ್ರಾರಂಭವಾಗಿದೆ. ಮುಂದೆ ಅವಶ್ಯಕತೆ ಇರುವ ಅನುದಾನ ಕೊಡಿಸತ್ತೇವೆ. ಜೊತೆಗೆ ಮತ್ತೆ ೧೦ ಲಕ್ಷ ನೀಡಲು ಸಿದ್ದ ಎಂದರು.
ಜಿಲ್ಲಾಧಿಕಾರಿ ಎಂ.ಆರ್. ರವಿ ಮಾತನಾಡಿ, ವೈದ್ಯರು ಕೆಟ್ಡವರಾಗಿದ್ದರೆ ಒಬ್ಬ ವ್ಯಕ್ತಿ ಸಾಯಬಹುದು. ಒಬ್ಬ ಎಂಜಿನಿಯರ್ ಕೆಟ್ಟವರಾದರೆ ಒಂದು ಕಟ್ಟಡ ಬೀಳಬಹುದು. ಆದ್ರೆ ಒಬ್ಬ ಶಿಕ್ಷಕ ಕೆಟ್ಟವರಾದರೆ ಇಡೀ ಸಮಾಜ ಕೆಟ್ಟದಾಗುತ್ತದೆ ಎಂದರು.
ಶಿಕ್ಷಕರಿಗೆ ಪ್ರತಿ ಕ್ಲಾಸ್ ಕೂಡ ಅಗ್ನಿ ಪರೀಕ್ಷೆ. ನಿರಂತರ ಕಲಿಕೆಯಲ್ಲಿ ತೊಡಗಬೇಕು. ಪಾಠ ಮಾಡುತ್ತಾ ಬೆಳೆಯಬೇಕು. ನನಗೆ ಶಿಕ್ಷಕರ ಬಗ್ಗೆ ಸಾತ್ವಿಕ ಕೋಪವಿದೆ. ಏಕೆಂದರೆ ಸಂದರ್ಶನ ಎದುರಿಸುವುದನ್ನು ಯಾರೂ ನನಗೆ ಹೇಳಿ ಕೊಡಲಿಲ್ಲ. ಪುಸ್ತಕ ಜ್ಞಾನಕ್ಕೆ ಸೀಮಿತವಾಗಿದೆ. ವ್ಯಕ್ತಿತ್ವ ಸುಧಾರಣೆಗೆ ಆದ್ಯತೆ ಕೊಡಬೇಕು. ಚಾರಿತ್ರ‍್ಯ ತುಂಬಬೇಕು. ವಿದ್ಯಾರ್ಥಿಗಳಿಗೆ ಪ್ರಪಂಚ ತೋರಿಸಬೇಕು. ಇಲ್ಲದಿದ್ದರೆ ತಮ್ಮ ಬೋಧನೆ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದರು.
ಸರ್ಕಾರಿ ಶಾಲೆ ಮುಚ್ಚಲು ಕಾರಣ ಏಕೆ? ದಾಖಲಾತಿ ಕಡಿಮೆ ಏಕೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆದರೆ, ಪ್ರತಿಭೆ ಇರುವುದು ಸರ್ಕಾರಿ ಶಾಲೆಯಲ್ಲಿ ಮಾತ್ರ. ಶಿಕ್ಷಕರ ಖಾಸಗಿ ವರ್ತನೆ ಕೂಡ ಚೆನ್ನಾಗಿರಬೇಕು. ಏಕೆಂದರೆ ವಿದ್ಯಾರ್ಥಿಗಳು, ಸಮಾಜ ಗಮನಿಸುತ್ತಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಎಲ್ಲರೂ ಏನನ್ನಾದರೂ ಕೊಡಬೇಕಾದರೆ ಜಿಪುಣತನ ತೋರಿಸುತ್ತೇವೆ. ಆದರೆ, ಶಿಕ್ಷಕರು ಮಾತ್ರ ತಮ್ಮ ಇಡೀ ಜೀವನವನ್ನು ಚೌಕಾಶಿ ಮಾಡದೆ ವಿದ್ಯಾರ್ಥಿಗಳಿಗೆ ಮುಡಿಪಾಗಿಟ್ಟಿದ್ದಾರೆ. ಶಿಕ್ಷಕರು ಮರ ನೀಡುವ ಹಣ್ಣುಗಳಂತೆ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಸಾವಿರಾರು ಮಂದಿಗೆ ದಾರಿ ತೋರಿಸಿದ್ದಾರೆ. ತೃಪ್ತಿದಾಯಕ ವೃತ್ತಿ. ತುಂಬಾ ಗೌರವ ಪಡೆಯುವ ವೃತ್ತಿ ಕೂಡ ಆಗಿದೆ. ಪೋಷಕರನ್ನು ಬಿಟ್ಟರೆ ಅತಿ ಹೆಚ್ಚು ನೆನಪಿಸಿಕೊಳ್ಳುವುದು ಶಿಕ್ಷಕರನ್ನು ಮಾತ್ರ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಮಾತನಾಡಿ, ಉತ್ತಮ ಸಮಾಜಕ್ಕಾಗಿ, ದೇಶದ ನಿರ್ಮಾಣಕ್ಕಾಗಿ ಬುನಾದಿ ಹಾಕುವವರು ಶಿಕ್ಷಕರು. ಉನ್ನತ ಹುದ್ದೆಯಲ್ಲಿ ಇದ್ದರೂ ಸಹ ಗುರುಗಳು ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ೧೮ ಶಿಕ್ಷಕರನ್ನು ಹಾಗೂ ನಿವೃತ್ತಿ ಶಿಕ್ಷಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು,
ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಬಿಇಒ ಮಧುಮಾಲತಿ ಸೇರಿದಂತೆ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳಾದ ಎಸ್.ಚೌಡಪ್ಪ, ಮುರಳಿ ಮೋಹನ್, ನಾಗರಾಜ್, ಮುನಿಯಪ್ಪ, ಅಪ್ಪೇಗೌಡ, ಶಿವಕುಮಾರ್, ಸಿ.ವಿ ನಾಗರಾಜ್ ಶಂಕರೇಗೌಡ, ರಮೇಶ್, ಮಂಜುಳಾ, ಮುಂತಾದವರು ಇದ್ದರು.
ಚಿತ್ರ ೦೫ ಕೆ.ಎಲ್.ಆರ್. ೦೩ : ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ.ಅನಿಲ್‌ಕುಮಾರ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಎಸ್.ಪಿ.ಬಿ.ನಿಖಿಲ್ ಮುಂತಾದವರು ಇದ್ದರು.
ಚಿತ್ರ ೦೫ ಕೆ.ಎಲ್.ಆರ್. ೦೩ಎ : ಶಿಕ್ಷಕರ ದಿನಾಚರಣೆ ಅಂಗವಾಗಿ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸುತ್ತಿರುವುದು.