

ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್ ನೇಮಕಕ್ಕೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮುಂದಾಗಿರುವುದು ವಿನೂತನ ಹಾಗೂ ದೂರದೃಷ್ಟಿಯ ಕ್ರಮವೆನ್ನಬಹುದು. ವಿವಿಧ ಕ್ಷೇತ್ರಗಳಲ್ಲಿನ ತಜ್ಞರನ್ನು ಬೋಧಕರಾಗಿ ನಿರ್ದಿಷ್ಟ ಕಾಲಾವಧಿಗೆ ನೇಮಕ ಮಾಡಿಕೊಳ್ಳುವುದರಿಂದ ವಾಸ್ತವ ಜಗತ್ತಿನ ಪ್ರಾಯೋಗಿಕ ಜ್ಞಾನದ ಹರಿವು ವಿದ್ಯಾರ್ಥಿಗಳಿಗೆ ದೊರೆಯಬಹುದಾಗಿದೆ. ಕೈಗಾರಿಕೆಗಳು ಹಾಗೂ ಉದ್ಯಮಗಳ ಅಗತ್ಯತೆಗೆ ಅನುಸಾರವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಅಗತ್ಯವಿರುವ ಪರಿಣತಿ ಲಭಿಸಬಹುದಾಗಿದೆ. ಕಳೆದ ವಾರ ಜರುಗಿದ ಯುಜಿಸಿಯ 560ನೇ ಸಭೆಯಲ್ಲಿ ಪ್ರೊಫೆಸರ್ ಆಫ್ ಪ್ರಾಕ್ಟೀಸ್ ನೇಮಕಾತಿಗೆ ನಿರ್ಧಾರ ತೆಗೆದುಕೊಂಡಿದ್ದು, ಮುಂದಿನ ತಿಂಗಳು ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಇದಕ್ಕಾಗಿ ಯುಜಿಸಿ ನಿಗದಿಪಡಿಸಲು ಉದ್ದೇಶಿಸಿರುವ ಮಾರ್ಗಸೂಚಿಗಳ ಪ್ರಕಾರ, ಈ ಹುದ್ದೆಗೆ ಯಾವುದೇ ಔಪಚಾರಿಕ ಶೈಕ್ಷಣಿಕ ಅರ್ಹತೆ ಇರುವುದಿಲ್ಲ. ಬೋಧಕ ವರ್ಗದ ನೇಮಕಾತಿಯ ಮಾನದಂಡಗಳಿಂದಲೂ ವಿನಾಯಿತಿ ಇರಲಿದೆ. ಇಂಜಿನಿಯರಿಂಗ್, ವಿಜ್ಞಾನ, ಮಾಧ್ಯಮ, ನಾಗರಿಕ ಸೇವೆ, ಸಶಸ್ತ್ರ ಪಡೆಗಳಂತಹ ಕ್ಷೇತ್ರಗಳಲ್ಲಿನ ತಜ್ಞರು ಈ ನೇಮಕಾತಿಗೆ ಅರ್ಹರಾಗಿರುತ್ತಾರೆ. ಕನಿಷ್ಠ 15 ವರ್ಷಗಳ ಸೇವೆ ಅಥವಾ ಅನುಭವ ಇರಬೇಕಾಗುತ್ತದೆ.
ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಹುದ್ದೆಗಳ ಸಂಖ್ಯೆಯು ಮಂಜೂರಾದ ಹುದ್ದೆಗಳ ಪೈಕಿ ಶೇ. 10ಕ್ಕಿಂತ ಹೆಚ್ಚು ಇರಬಾರದು. ಈ ನೇಮಕಾತಿ ಗರಿಷ್ಠ 3 ವರ್ಷಗಳದ್ದಾಗಿದ್ದು, ಅಗತ್ಯವಿದ್ದಲ್ಲಿ ಇನ್ನೊಂದು ವರ್ಷ ವಿಸ್ತರಿಸಬಹುದು. ಈಗಾಗಲೇ ಬೋಧನಾ ವೃತ್ತಿಯಲ್ಲಿ ಇರುವವರು ಮತ್ತು ನಿವೃತ್ತರಾದವರನ್ನು ಪರಿಗಣಿಸಬಾರದು ಎಂದು ಯುಜಿಸಿ ಸ್ಪಷ್ಟಪಡಿಸಿರುವುದು ಸಮಂಜಸ ನೀತಿಗಳಾಗಿ ಕಂಡುಬರುತ್ತವೆ. ಈ ಪ್ರೊಫೆಸರ್ಗಳಿಗೆ ಸಂಬಳವನ್ನು ಕೈಗಾರಿಕೆಗಳ ನೆರವಿನೊಂದಿಗೆ ಇಲ್ಲವೇ ಶಿಕ್ಷಣ ಸಂಸ್ಥೆಗಳು ಸ್ವಂತ ಸಂಪನ್ಮೂಲದ ಮೂಲಕ ಅಥವಾ ಗೌರವದ ಆಧಾರದ ಮೇಲೆ ನೀಡಲು ಉದ್ದೇಶಿಸಲಾಗಿದೆ. ಬೋಧನೆಯ ಜತೆಗೆ ಹೊಸ ಕೋರ್ಸ್ ಪರಿಚಯಿಸುವುದು. ನಾವೀನ್ಯತೆ ಮತ್ತು ಉದ್ಯಮಶೀಲತೆ ಯೋಜನೆಗಳಲ್ಲಿ ವಿದ್ಯಾರ್ಥಿಗಳನ್ನು ಪೋ›ತ್ಸಾಹಿಸಿ ಅಗತ್ಯವಾದ ಮಾರ್ಗದರ್ಶನ ಒದಗಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಲು ಉದ್ದೇಶಿಸಿರುವುದು ದೂರದೃಷ್ಟಿಯ ಕ್ರಮವಾಗಿದೆ. ರಾಜಕಾರಣದ ಅಂಗಳದಲ್ಲಿ ಈಗಾಗಲೇ ಇಂತಹ ಪ್ರಯೋಗಗಳು ಜರುಗಿ ಸಾಕಷ್ಟು ಯಶಸ್ಸನ್ನು ಕೂಡ ಕಂಡಿವೆ. ಕೇಂದ್ರ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಹಾಗೂ ನಂತರ ಪ್ರಧಾನಿಯೂ ಆದ ಮನಮೋಹನ ಸಿಂಗ್ ರಾಜಕೀಯದ ಗಂಧಗಾಳಿಯೂ ಇಲ್ಲದವರು. ಆರ್ಥಿಕ ತಜ್ಞರು ಎಂಬ ಕಾರಣದಿಂದಲೇ 1991ರಲ್ಲಿ ಪಿ.ವಿ.ನರಸಿಂಹ ರಾವ್ ಅವರು ಸಿಂಗ್ ಅವರನ್ನು ಹಣಕಾಸು ಸಚಿವರಾಗಿ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು. ಉದಾರೀಕರಣ, ಖಾಸಗೀಕರಣ ನೀತಿ ಜಾರಿಯಾದದ್ದು ಆ ಅವಧಿಯಲ್ಲೇ. ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಎಸ್. ಜೈಶಂಕರ್ ಅವರನ್ನು ಈಗ ವಿದೇಶಾಂಗ ಸಚಿವರನ್ನಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಯ್ಕೆ ಮಾಡಿಕೊಂಡು ವಿದೇಶಾಂಗ ನೀತಿಗಳಿಗೆ ಸಂಬಂಧಿಸಿದಂತೆ ಅವರ ನೈಪುಣ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಇದೇ ರೀತಿ ವಿಶ್ವವಿದ್ಯಾಲಯಗಳು ವಿವಿಧ ಕ್ಷೇತ್ರಗಳಲ್ಲಿರುವ ನಿಜವಾದ ತಜ್ಞರನ್ನು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಬಳಸಿಕೊಂಡರೆ ಉತ್ತಮ ಫಲಿತಾಂಶ ದೊರೆಯುವುದರಲ್ಲಿ ಸಂದೇಹವಿಲ್ಲ.