

ನವದೆಹಲಿ: ಡಿಜಿಟಲ್ ಬಳಕೆಯಿಂದ ಜನರ ಕೆಲಸ ಸುಲಭವಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಅದರಿಂದ ಆತಂಕ ಕಾಡುತ್ತಿರುವುದು ಕೂಡ ಕಂಡುಬಂದಿದೆ. ಸಂವಹನ ಸುಲಭಗೊಳಿಸಿರುವ ತಾಂತ್ರಿಕತೆ, ಗೊಂದಲ-ಭಯ ಹುಟ್ಟಿಸುವುದಕ್ಕೆ ಕೂಡ ಬಳಕೆ ಆಗುತ್ತಿದೆ. ಅಂಥದ್ದೇ ಒಂದು ಪ್ರಕರಣವಿದು.
ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿರುವ ಒಂದು ಫಾರ್ವರ್ಡ್ ಮೆಸೇಜ್ ಅದರ ಹಲವಾರು ಬಳಕೆದಾರರಲ್ಲಿ ಒಂದಷ್ಟು ಗೊಂದಲ-ಆತಂಕ ಮೂಡಿಸಿದ್ದು, ಆ ಕುರಿತಾಗಿ ಸ್ಪಷ್ಟನೆಯನ್ನೇ ಹೊರಡಿಸಿಬೇಕಾದ ಅನಿವಾರ್ಯತೆ ಎದುರಾಗಿದೆ.
ಕೇಂದ್ರ ಸರ್ಕಾರ ಹೊಸ ವಾಟ್ಸ್ಆ್ಯಪ್ ಮಾರ್ಗಸೂಚಿ ಹೊರಡಿಸಿದ್ದು, ಜನರ ವಾಟ್ಸ್ಆ್ಯಪ್ ಚಾಟ್ ಮೇಲೆ ನಿಗಾ ಇರಿಸಿದ್ದಲ್ಲದೆ, ಅಗತ್ಯ ಬಿದ್ದರೆ ಕ್ರಮ ಕೂಡ ಜರುಗಿಸಲಿದೆ ಎಂಬ ಮಾಹಿತಿ ಫಾರ್ವರ್ಡ್ ಆಗುತ್ತಿದೆ. ನೀವು ಕಳಿಸಿರುವ ಮೆಸೇಜ್ನಲ್ಲಿ ಮೂರು ಬ್ಲೂ ಟಿಕ್ ಬಂದರೆ ಸರ್ಕಾರ ಅದನ್ನು ಗಮನಿಸಿದೆ ಅಂತರ್ಥ. 2 ಬ್ಲೂ ಮತ್ತು 1 ರೆಡ್ ಟಿಕ್ ಬಂದರೆ ಸರ್ಕಾರ ನಿಮ್ಮ ವಿರುದ್ಧ ಕ್ರಮ ಜರುಗಿಸಬಹುದು ಎಂಬುದೂ ಸೇರಿದಂತೆ ಒಂದಷ್ಟು ಅಂಶಗಳನ್ನು ಹೊಂದಿರುವ ಈ ಫಾರ್ವರ್ಡ್ ಮೆಸೇಜ್ ಹರಿದಾಡುತ್ತಿದೆ.
ಆದರೆ ಇದು ಫೇಕ್ ಮೆಸೇಜ್ ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ. ಈ ಸಂದೇಶ ಸುಳ್ಳು. ಕೇಂದ್ರ ಸರ್ಕಾರ ಅಂಥ ಯಾವುದೇ ಮಾರ್ಗಸೂಚಿಯನ್ನು ಹೊರಡಿಸಿಲ್ಲ ಎಂಬುದಾಗಿ ಪಿಐಬಿ ಸತ್ಯಪರಿಶೀಲನೆ ನಡೆಸಿ ಸ್ಪಷ್ಟನೆ ನೀಡಿದೆ.